ರಾಯಚೂರು : ದೇವದುರ್ಗ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮನಂದ ಸ್ವಾಮೀಜಿ (50) ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ 3:30ರ ವೇಳೆ ಹೃದಯ ಸ್ತಂಭನದಿಂದ ಅಸ್ತಂಗತರಾಗಿದ್ದಾರೆ.
ಲವಲವಿಕೆಯಿಂದ ಓಡಾಡಿಕೊಂಡಿದ್ದ ಸ್ವಾಮೀಜಿ ಇದೇ ಜ.12, 13, 14 ರಂದು ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ನಡೆಸಿದ್ದರು. ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಪೂಜಾರಿಗಳ ಶಿಬಿರ ಅದ್ದೂರಿಯಾಗಿ ನಡೆದಿತ್ತು. ಮೊದಲ ಬಾರಿಗೆ ರಾಜಕೀಯ ವ್ಯಕ್ತಿಗಳಿಂದ ಮುಕ್ತವಾದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಕಳೆದ ಒಂದು ವಾರದಿಂದ ಸರಿಯಾಗಿ ಊಟ, ನಿದ್ದೆ ಮಾಡದೇ ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರಿಂದ ಬುಧವಾರ ರಾತ್ರಿ ಲೋ ಬಿಪಿಯಿಂದ ಸ್ವಾಮೀಜಿ ಬಳಲಿದ್ದರು. ಕೂಡಲೇ ಅವರನ್ನು ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಸಿದ್ದರಾಮಾನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯವರು. ಮಹದೇವಯ್ಯ ಮತ್ತು ಜಯಮ್ಮ ದಂಪತಿಯ 2ನೇ ಪುತ್ರನಾಗಿ ಜನಿಸಿದ್ದ ಇವರ ಮೂಲ ಹೆಸರು ಮೋಹನ್ ಪ್ರದಾನ ಆಗಿತ್ತು. 18ನೇ ವಯಸ್ಸಿಗೆ ಮನೆ ತೊರೆದಿದ್ದ ಇವರು ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೆ ಒಳಗಾಗಿದ್ದರು.




