ಗಿರೀಶ್ ಹುಣಸೂರು
ವರ್ಷವಿಡೀ ಬೆವರು ಸುರಿಸಿ ದುಡಿದು ಬೆಳೆದ ದವಸ ಧಾನ್ಯಗಳನ್ನು ಮನೆತುಂಬಿಸಿಕೊಂಡ ಸಂಭ್ರಮದಲ್ಲಿ ಆಚರಿಸುವ ವರ್ಷದ ಮೊದಲ ಹಬ್ಬವೇ ಸಂಕ್ರಾಂತಿ. ಈ ಸುಗ್ಗಿಹಬ್ಬವನ್ನು ಬೇರೆ ಬೇರೆ ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸಿದರೂ ಸಂಭ್ರಮ, ಸಡಗರ, ಉತ್ಸಾಹದಲ್ಲೇನು ಭಿನ್ನತೆ ಕಾಣುವುದಿಲ್ಲ.
ಪ್ರತಿ ವರ್ಷ ಜನವರಿ ೧೪ ಅಥವಾ ೧೫ರಂದು ಸಂಕ್ರಾಂತಿ ಹಬ್ಬವನ್ನು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಸಂಕ್ರಾಂತಿ ಹಬ್ಬದ ದಿನ ‘ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ’ ಎಂಬ ನಾಣ್ಣುಡಿಯೂ ಪ್ರಚಲಿತದಲ್ಲಿದೆ.
ರಾಜ್ಯದಲ್ಲಿ ಸಂಕ್ರಾಂತಿ ಹಬ್ಬವನ್ನು ಅನ್ನದಾತೆಯಾದ ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿ ರೈತಾಪಿ ವರ್ಗ ಆಚರಿಸುತ್ತದೆ. ಹೊಸ ಬಟ್ಟೆ ಧರಿಸಿ, ಮನೆಮಂದಿಯೆಲ್ಲಾ ಸೇರಿ ಹಬ್ಬದ ಅಡುಗೆ ತಯಾರಿಸಿ ಊಟ ಮಾಡುವುದು ಈ ಹಬ್ಬದ ವಾಡಿಕೆ.
ಸಂಕ್ರಾಂತಿ ಹಬ್ಬದ ದಿನ ರೈತಾಪಿ ವರ್ಗದವರು ತಮ್ಮ ಜಮೀನಿನಲ್ಲಿ ಉತ್ತಮ -ಸಲು ಬೆಳೆಯಲು ಕಾರಣವಾದ ಸೂರ್ಯ ದೇವನಿಗೆ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ. ಕೆಲವೆಡೆ ಹಬ್ಬಕ್ಕೂ ಮುನ್ನ ಮನೆಗಳಿಗೆ ಸುಣ್ಣ-ಬಣ್ಣ ಬಳಿದು, ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಬಣ್ಣ ಬಣ್ಣದ ರಂಗೋಲಿ ಬಿಟ್ಟು ಸಂಭ್ರಮಿಸುತ್ತಾರೆ. ಕೆಲವರ ಮನೆಗಳಲ್ಲಿ ಸಸ್ಯಾಹಾರದ ಊಟವಾದರೆ, ಇನ್ನು ಕೆಲವರು ಮಾಂಸಾಹಾರದ ಭರ್ಜರಿ ಭೋಜನ ಸವಿಯುತ್ತಾರೆ. ಹೆಣ್ಣು ಮಕ್ಕಳು, ಮಹಿಳೆಯರು ಹೊಸ ಬಟ್ಟೆ ಉಟ್ಟು ನೆರೆ ಹೊರೆಯವರಿಗೆ ಎಳ್ಳು-ಬೆಲ್ಲ ಹಂಚಿ ಸಂಭ್ರಮಿಸುತ್ತಾರೆ. ಇದಕ್ಕೆ ನಿದರ್ಶನವೆಂದರೆ ಬೆಂಗಳೂರು ಹೆದ್ದಾರಿಯಲ್ಲಿರುವ ಮೈಸೂರು ತಾಲ್ಲೂಕಿನ ಸಿದ್ಧಲಿಂಗಪುರ ಗ್ರಾಮ.
ಈ ಊರಿನಲ್ಲಿ ಸಂಕ್ರಾಂತಿಯಂದು ರಾಸುಗಳ ಕಿಚ್ಚು ಹಾಯಿಸುವುದನ್ನುನೋಡುವುದೇ ಹಬ್ಬ. ಮೈಸೂರು ಜಿಲ್ಲಾದ್ಯಂತ ಜನತೆಗೆ ‘ಕಿಚ್ಚು ಹಾಯಿಸುವುದು’ ಎಂದರೆ ಸಿದ್ಧಲಿಂಗಪುರವೇ ಕಣ್ಣುಗಳ ಮುಂದೆ ಪ್ರತ್ಯಕ್ಷವಾಗುತ್ತದೆ.
ರಾಸುಗಳನ್ನು ಅಲಂಕರಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿ ಕಿಚ್ಚು ಹಾಯಿಸುವ ರೋಮಾಂಚನಕಾರಿ ದೃಶ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿಯೇ ಸ್ಥಳೀಯರು ಮಾತ್ರವಲ್ಲ, ಪ್ರವಾಸಿಗರೂ ರಸ್ತೆಯ ಇಕ್ಕೆಲಗಳಲ್ಲಿ ಕಾದುಕುಳಿತುಕೊಳ್ಳುವ ದೃಶ್ಯ ಇಲ್ಲಿ ಸಾಮಾನ್ಯ.
ಮೈಸೂರು ನಗರ ಪ್ರದೇಶದಲ್ಲಿ ಕಾಣಸಿಗುವ ಹಬ್ಬದ ಸಡಗರವೇ ಬೇರೆ. ಮನೆ ಮಂದಿಯೆಲ್ಲ ಹೊಸಬಟ್ಟೆ ತೊಟ್ಟು, ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಬಂದು ನೆರೆಹೊರೆಯವರಿಗೆ ಎಳ್ಳು-ಬೆಲ್ಲ ಬೀರಿ, ಹಬ್ಬದ ಅಡುಗೆ ಮಾಡಿ ಊಟ ಮಾಡುತ್ತಾರೆ. ಇದೊಂದು ರೀತಿಯಲ್ಲಿ ಯಾಂತ್ರಿಕ ಅನಿಸುತ್ತದೆ.





