ಲಕ್ಷ್ಮೀಕಾಂತ್ ಕೋಮಾರಪ್ಪ
ಮಕರ ಸಂಕ್ರಾಂತಿ ಹಾಗೂ ಶಾಂತಳ್ಳಿ ಜಾತ್ರೆ, ರಥೋತ್ಸವದ ಅಂಗವಾಗಿ ಸೋಮವಾರಪೇಟೆ ಶ್ರೀ ಕ್ಷೇತ್ರ ಪುಷ್ಪಗಿರಿ (ಕುಮಾರ ಪರ್ವತ) ಬೆಟ್ಟದಲ್ಲಿ ವಿಭಿನ್ನ ಆಚರಣೆ ನಡೆಯುತ್ತಿದ್ದು, ಜ್ಯೋತಿ ದರ್ಶನ ಗಮನ ಸೆಳೆಯುತ್ತದೆ.
ಸಂಕ್ರಾಂತಿಯಂದು ಶ್ರೀ ಕ್ಷೇತ್ರ ಪುಷ್ಪಗಿರಿ ಬೆಟ್ಟದಲ್ಲಿ ಗಂಗೆ ಬಾವಿ ಪೂಜೆ, ಶಿವ ಪಾದಪೂಜೆ, ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಯ ಪಾದಪೂಜೆ ನಡೆಯು ತ್ತದೆ. ಬಳಿಕ ಸಂಜೆ ಮಹಾ ಮಂಗಳಾರತಿ ನಡೆಯ ಲಿದ್ದು, ಈ ಸಂದರ್ಭ ಜ್ಯೋತಿ ಹೊತ್ತಿಸಿ ಕೆಲವರು ಅಲ್ಲಿಯೇ ಮಲಗುತ್ತಾರೆ. ಮಾರನೆಯ ದಿನ ದೇವರನ್ನು ಅಲ್ಲಿಂದ ಗ್ರಾಮಕ್ಕೆ ಕರೆದುಕೊಂಡು ಬರುವುದು ಸಂಪ್ರದಾಯ.
ರಾತ್ರಿ ಬೆಟ್ಟದ ಮೇಲೆ ಮಹಾಮಂಗಳಾರತಿ ಸಂದರ್ಭ ಹೊತ್ತಿರುವ ಜ್ಯೋತಿ ಶಬರಿ ಮಲೆ ಅಯ್ಯಪ್ಪ ದೇವರ ಜ್ಯೋತಿ ದರ್ಶನದಂತೆ ಗ್ರಾಮಗಳಿಗೆ ಕಾಣುತ್ತದೆ. ಬೆಟ್ಟದ ಮೇಲಿನ ಜ್ಯೋತಿಯು ಪುಷ್ಪಗಿರಿ ಸುತ್ತ ಮುತ್ತಲಿನ ಹಲವು ಗ್ರಾಮಗಳಿಗೆ ಕಾಣಲಿದ್ದು, ಜ್ಯೋತಿಯನ್ನು ಗ್ರಾಮಸ್ಥರು ಕಣ್ತುಂಬಿಕೊಳ್ಳುತ್ತಾರೆ.
ಪ್ರತಿ ವರ್ಷ ಮಕರ ಸಂಕ್ರಮಣ ಮಕರ ಜ್ಯೋತಿ ಯಂದು ಪುಷ್ಪಗಿರಿ ಬೆಟ್ಟದಲ್ಲಿ ನಡೆಯುವ ಈ ದೇವತಾ ಕಾರ್ಯದಲ್ಲಿ ಹಲವೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.
ಪುಷ್ಪಗಿರಿ ಬೆಟ್ಟದ ಸುತ್ತಮುತ್ತಲಿನ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪುಷ್ಪಗಿರಿ ಬೆಟ್ಟದ ಶಿವಪಾದ ಮತ್ತು ಸುತ್ತಮುತ್ತಲಿನ ವೀಕ್ಷಣೆ ಸ್ಥಳಗಳನ್ನು ಕಣ್ತುಂಬಿಕೊಳ್ಳುತ್ತಾರೆ.





