Mysore
28
clear sky

Social Media

ಗುರುವಾರ, 15 ಜನವರಿ 2026
Light
Dark

ನೋಡಬನ್ನಿ ಸುತ್ತೂರು ಜಾತ್ರೆಯ ವೈಭಯ

ಎಸ್.ಎಸ್.ಭಟ್‌
ನಂಜನಗೂಡು : ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ವೈಜ್ಞಾನಿಕ, ಕಲಾ ಸೊಬಗಿನ ಜಾತ್ರೆ ಎಂದರೆ ಸೂತ್ತೂರು ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಇದರಿಂದಾಗಿಯೇ, ಹತ್ತೂರು ಜಾತ್ರೆ ಸುತ್ತುವುದಕ್ಕಿಂತ ಸುತ್ತೂರು ಜಾತ್ರೆ ಸುತ್ತಿದರೆ ಲೇಸು ಎಂಬ ಮಾತು ಪ್ರಚಲಿತದಲ್ಲಿದೆ.

ರಾಜ್ಯದ ಬೇರೆಲ್ಲ ಜಾತ್ರೆಗಳು ಕೇವಲ ಧಾರ್ಮಿಕ ಹಾಗೂ ಸಂಸ್ಕ ತಿಗೆ ಮೀಸಲಾಗಿದ್ದರೆ, ಸುತ್ತೂರು ಜಾತ್ರೆ ಇವೆಲ್ಲಕ್ಕಿಂತಲೂ ವಿಭಿನ್ನ. ಇಲ್ಲಿ ಏನುಂಟು, ಏನಿಲ್ಲ ಎಂಬಂತೆ ಸಮಾಜದ ಎಲ್ಲ ವರ್ಗಗಳನ್ನೂ ಆಕರ್ಷಿಸುವುದರ ಜತೆಗೆ ಜ್ಞಾನವನ್ನು ವಿಕಸನಗೊಳಿಸುವ ರೀತಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿರುವುದೇ ಸುತ್ತೂರು ಜಾತ್ರೆಯ ವೈಶಿಷ್ಟ್ಯ.

ಗ್ರಾಮ ಹಾಗೂ ಮಠಕ್ಕೆ ಸೀಮಿತವಾಗಿದ್ದ ಜಾತ್ರಾ ಮಹೋತ್ಸವನ್ನು ವಿಸ್ತರಿಸಿದವರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು. ಸಹಸ್ರಾರು ವರ್ಷಗಳ ಇತಿಹಾಸ ಇರುವ ಸುತ್ತೂರು ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದ ಸ್ವರೂಪವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿ ರಾಜ್ಯದ ಗಡಿ ದಾಟಿಸಿ ರಾಷ್ಟ್ರವ್ಯಾಪಿ ಪ್ರಸಿದ್ಧ ಜಾತ್ರೆಯನ್ನಾಗಿಸಿದ ಹೆಗ್ಗಳಿಕೆ ಸುತ್ತೂರು ಮಠದ ಈಗಿನ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರದ್ದಾಗಿದೆ. ನಾನಾ ಕಡೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ.

ಕೃಷಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ರಾಜಕಾರಣಿಗಳು ಹೀಗೆ ನಾನಾ ಸ್ತರದ ಜನರು ಈ ಜಾತ್ರೆಗೆ ಬಂದು ಜ. ೧೫ರಿಂದ ಆರಂಭವಾಗಿ ಆರು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಸಂತೋಷದಿಂದ ಭಾಗವಹಿಸಿ ವಿಶೇಷ ಅನುಭವ ಪಡೆಯುತ್ತಾರೆ ಎಂದೇ ಹೇಳಬಹುದು.

ಜಾತ್ರೆಯ ಆರಂಭದ ದಿನದಿಂದ ಸಮಾರಂಭ ಸಂಪನ್ನಗೊಳ್ಳುವವರೆಗೂ ವಸತಿ, ಊಟೋಪಚಾರದ ವ್ಯವಸ್ಥೆ ಇರುತ್ತದೆ. ಹಾಗೆಯೇ ಧಾರ್ಮಿಕ ಜ್ಞಾನ ಸಂಪಾದನೆಗೂ ಕೊರತೆ ಇರುವುದಿಲ್ಲ. ವಿಜ್ಞಾನದ ಆವಿಷ್ಕಾರ, ಹೊಸ ಹೊಸ ಕೃಷಿ ಪದ್ಧತಿಗಳ ತಿಳಿವಳಿಕೆ ಹಾಗೂ ಕೃಷಿ ಬೆಳೆಗಳ ಪರಿಚಯವನ್ನೂ ಮಾಡಿಕೊಳ್ಳಬಹುದಾಗಿದೆ. ನಾನಾ ಕ್ಷೇತ್ರಗಳ ಸಂಗಮದಂತಿರುವ ಈ ಸುತ್ತೂರು ಜಾತ್ರೆಯಲ್ಲಿ ಎಲ್ಲ ವರ್ಗದ ಜನರು ಸಂತೋಷ, ಸಂಭ್ರವನ್ನು ಆಸ್ವಾದಿಸಬಹುದಾಗಿದೆ.

Tags:
error: Content is protected !!