ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಟ್ಟಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಂಗಳವಾರ ಮಧ್ಯಾಹ್ನ 1.25ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಲಿದ್ದಾರೆ.
ಹೊಸದಿಲ್ಲಿಯಿಂದ ಕೇರಳಕ್ಕೆ ಮೈಸೂರು ಮಾರ್ಗವಾಗಿ ತೆರಳಲಿರುವ ರಾಹುಲ್‌ಗಾಂಧಿ ಅವರನ್ನು ಇಬ್ಬರು ಒಟ್ಟಾಗಿ ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ. ಎಐಸಿಸಿ ನಾಯಕರೂ ಆದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ಹೊಸದಿಲ್ಲಿಯಿಂದ ಹೊರಟು ಮೈಸೂರು ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಆಗಮಿಸಲಿದ್ದಾರೆ. ನಂತರ ವಿಶೇಷ ಹೆಲಿಕ್ಯಾಪ್ಟರ್‌ನಲ್ಲಿ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮತ್ತೆ ಸಂಜೆ 6 ಕ್ಕೆ ಮೈಸೂರಿಗೆ ಆಗಮಿಸಿ ವಿಶೇಷ ವಿಮಾನದಲ್ಲಿ ಹೊಸದಿಲ್ಲಿಗೆ ಪಯಣ ಮಾಡಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಟ್ಟಿಗೇ ವಿಶೇಷ ವಿಮಾನದಲ್ಲಿ ಮಂಗಳವಾರ ಮಧ್ಯಾಹ್ನ 1.25ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ.
ರಾಹುಲ್ ಗಾಂಧಿ ಅವರು ಕೇರಳದಿಂದ ವಾಪಸ್ ಬರುವ ತನಕವೂ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ಸಮಯವನ್ನು ಕಾಯ್ದಿರಿಸಲಾಗಿದೆ. ಎರಡು ಬಾರಿ ಹೊಸದಿಲ್ಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರಿಗೆ ರಾಹುಲ್ ಅವರು ವಿದೇಶ ಪ್ರವಾಸದಲ್ಲಿದ್ದ ಕಾರಣ ಭೇಟಿ ಸಾಧ್ಯವಾಗಿರಲಿಲ್ಲ. ಮಂಗಳವಾರ ಈ ಇಬ್ಬರು ಸಚಿವ ಸಂಪುಟ ಪುನಾರಚನೆ, ಬಜೆಟ್ ತಯಾರಿ ಇನ್ನಿತರ ಅಂಶಗಳನ್ನು ಕುರಿತು ಚರ್ಚಿಸಲಿದ್ದು, ಸಿಎಂ ಗ್ರೀನ್ ಸಿಗ್ನಲ್ ಪಡೆಯಬಹುದೆಂದು ಮೂಲಗಳು ಹೇಳಿವೆ. ಸಿಎಂ ಜತೆಗೆ ಡಿಸಿಎಂ ಕೂಡ ಒಟ್ಟಿಗೇ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿರುವುದರಿಂದ ಕುತೂಹಲ ಹೆಚ್ಚಿಸಿದೆ.





