Mysore
31
scattered clouds

Social Media

ಮಂಗಳವಾರ, 12 ಮೇ 2026
Light
Dark

ರಂಗಭೂಮಿ ಧರ್ಮಾತೀತ,ಜಾತ್ಯತೀತವಾದದ್ದು : ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಬಣ್ಣನೆ

ಮೈಸೂರು : ರಂಗಭೂಮಿ ಎಂಬುದು ಧರ್ಮಾತೀತ, ಜಾತ್ಯತೀತ ಅಲ್ಲದೇ ದೇಶಾತೀತ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಬಣ್ಣಿಸಿದರು.

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಆವರಣದ ಕೆಎಸ್‌ಜಿಎಚ್ ಸಭಾಂಗಣದಲ್ಲಿ ಸೋಮವಾರ ಸಂಗೀತ ವಿವಿ ಹಾಗೂ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ರಂಗಭೂಮಿ ಮತ್ತು ಪ್ರದರ್ಶಕ ಕಲೆಗಳು’ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿ ಎಂಬುದು ಭಾಷೆ, ದೇಶ, ಹೀಗೆ ಎಲ್ಲಾ ಗಡಿಗಳನ್ನೂ ಮೀರಿದ್ದು. ಇಲ್ಲಿಗೆ ಬರುವವರು ರಾಮನಾಗುತ್ತಾರೆ, ಕೃಷ್ಣನಾಗುತ್ತಾರೆ. ಎಲ್ಲಾ ಮಹಾಪುರುಷರ ಆದರ್ಶಗಳನ್ನು ಅಭಿನಯದ ಮೂಲಕ ತೋರುತ್ತಾರೆ. ಈ ಮೂಲಕ ಅವರು ಆದರ್ಶ ವ್ಯಕ್ತಿಗಳಾಗಲು ಯತ್ನಿಸುತ್ತಾರೆ ಎಂದು ಹೇಳಿದರು.

ಭಾರತ ಎಂಬುದು ಬಹುತ್ವದ ದೇಶ. ಇಲ್ಲಿ ನೃತ್ಯ, ಸಂಗೀತ, ಆದಿವಾಸಿ, ಬುಡಕಟ್ಟುಗಳ ಕಲೆಗಳು ವಿಭಿನ್ನವಾಗಿವೆ. ನಮ್ಮ ರಾಜ್ಯದಲ್ಲಿ ಸಂಗೀತ ವಿವಿ, ಮಹಿಳಾ ವಿವಿ, ಕನ್ನಡ ವಿವಿ, ರಾಣಿ ಚನ್ನಮ್ಮ ವಿವಿ. ನಾಟಕ ಅಕಾಡೆಮಿ, ಹೀಗೆ ಎಲ್ಲವೂ ಇದೆ. ಇಷ್ಟು ವೈವಿಧ್ಯತೆ ದೇಶದ ಬೇರೆ ರಾಜ್ಯಗಳಲ್ಲಿ ಕಾಣ ಸಿಗುವುದಿಲ್ಲ ಎಂದರು.

ಜಗತ್ತು ಇಂದು ಬದಲಾಗುತ್ತಿದೆ. ತಂತ್ರಜ್ಞಾನ, ವಿಜ್ಞಾನ ಎಲ್ಲೆಡೆ ತನ್ನ ಛಾಪು ಮೂಡಿಸುತ್ತಿದೆ. ಎಐ ತಂತ್ರಜ್ಞಾನದ ಮೂಲಕ ಕಳೆದು ಹೋಗಿರುವ ನಾಗರಿಕತೆಯನ್ನೇ ಹುಟ್ಟುಹಾಕಬಹುದಾಗಿದೆ. ಇದರ ನಡುವೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ ಎಂದರು.

ಮಧ್ಯಪ್ರದೇಶ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಹಾಗೂ ಹಿರಿಯ ಐಎಎಸ್ ಅಧಿಕಾರಿ ಎಸ್.ಧನರಾಜು ಮಾತನಾಡಿ, ಮನುಷ್ಯರಲ್ಲಿ ಮಾನ ವೀಯತೆಯನ್ನು ಬೆಳೆಸಲು ಕಲೆ, ಸಾಹಿತ್ಯ, ಸಂಗೀತ ಸಹಕಾರಿ ಎಂದು ತಿಳಿಸಿದರು.

ಸಂಗೀತ ವಿವಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುಎಸ್‌ಎನ ಟೆಕ್ಸಾಸ್ ವಿವಿಯ ವಸ್ತ್ರ ವಿನ್ಯಾಸಕಿ ಪ್ರೊ.ಸಾರಾ ಮೋಷರ್, ಪ್ರೊ.ಸಾರಾ ಕರನ್ ಐಸ್, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ರಾಜೇಶ್ ಎಚ್. ತಲಕಾಡು, ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್ ಮುಂತಾದವರು ಹಾಜರಿದ್ದರು.

Tags:
error: Content is protected !!