ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ಮುಹೂರ್ತ ಫಿಕ್ಸ್ ಆಗಿದ್ದು, ಜೂನ್.30ರೊಳಗೆ ಜಿಬಿಎ ವ್ಯಾಪ್ತಿಯಲ್ಲಿರುವ 5 ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ಪ್ರಕಟಿಸಿದೆ.
ಜಿಬಿಎಗೆ ಚುನಾವಣೆ ನಡೆಸುವ ಸಂಬಂಧ ಇಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಎಜಿ ಶಶಿಕಿರಣ್ ವಾದಿಸಿದರು.
ಕಡೆಯ ಹಂತದ ಮೀಸಲಾತಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಮೀಸಲಾತಿ ಪ್ರಕ್ರಿಯೆ ಫೆಬ್ರವರಿ.28ರವೆರೆಗೂ ನಡೆಯಲಿದೆ. ಮೀಸಲಾತಿ ಪ್ರಕ್ರಿಯೆ ಬಳಿಕ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ ಎಂದು ಸರ್ಕಾರದ ವಕೀಲ ಅಭಿಷೇಕ್ ಮನುಸಿಂಘ್ವಿ ತಿಳಿಸಿದರು.
ಚುನಾವಣಾ ಆಯೋಗದ ಪರ ವಕೀಲರು ಮಾರ್ಚ್.16ರ ವೇಳೆಗೆ ಮತದಾರರ ಪರಿಶೀಲನೆ ಅಂತ್ಯವಾಗಲಿದೆ. ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಹೀಗಾಗಿ ಮೇ ಕೊನೆ ವಾರದವರೆಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಂತಿಮವಾಗಿ ಚುನಾವಣಾ ಪ್ರಕ್ರಿಯೆ ಮುಗಿಸಲು ಎಷ್ಟು ಸಮಯಬೇಕು ಎಂದು ಕೋರ್ಟ್ ಪ್ರಶ್ನಿಸಿತು. ಇದಕ್ಕೆ ಜೂನ್‌ವರೆಗೂ ಸಮಯ ಬೇಕಾಗಬಹುದು ಎಂದು ಆಯೋಗ ಉತ್ತರಿಸಿತು. ಸುಪ್ರೀಂಕೋರ್ಟ್ ಜೂನ್.30ರೊಳಗೆ ಜಿಬಿಎ ಚುನಾವಣೆ ನಡೆಸಲು ನಿರ್ದೇಶನ ನೀಡಿತು. ಇದರ ಜೊತೆಗೆ ರಾಜ್ಯ ಸರ್ಕಾರಕ್ಕೆ ಮತ್ತೆ ಸಮಯ ಕೇಳದಂತೆ ಎಚ್ಚರಿಕೆ ನೀಡಿತು.





