ಮಹಾದೇಶ್ ಎಂ ಗೌಡ
ಹನೂರು: ಲೊಕ್ಕನಹಳ್ಳಿ ಗ್ರಾಮದ ತಮಿಳ್ ಸೆಲ್ವ ಎಂಬುವವರ ಜಮೀನಿನಲ್ಲಿ ಬೆಳೆದಿರುವ ಬಾಳೆ, ಬೆಳ್ಳುಳ್ಳಿ, ಕೃಷಿ ಪರಿಕರಗಳನ್ನು ಕಾಡಾನೆಗಳ ಹಿಂಡು ನಿರಂತರವಾಗಿ ಲಗ್ಗೆ ಇಟ್ಟು ನಾಶಪಡಿಸಿರುವ ಘಟನೆ ಜರುಗಿದೆ.
ಲೊಕ್ಕನಹಳ್ಳಿ ಗ್ರಾಮದ ತಮಿಳ್ ಸೆಲ್ವ ಎಂಬುವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ ಬಾಳೆ, ಬೆಳ್ಳುಳ್ಳಿ, ಬೆಳೆಗಳನ್ನು ಬೆಳೆದಿದ್ದಾರೆ. ಕಳೆದ ಐದು ದಿನಗಳಿಂದ ಕಾಡಾನೆಗಳ ಹಿಂಡು ನಿರಂತರವಾಗಿ ದಾಳಿ ಮಾಡಿ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ನಾಶಪಡಿಸಿದೆ. ಜೊತೆಗೆ ನೀರು ಹಾಯಿಸಲು ಇಟ್ಟಿರುವ ಕೃಷಿ ಪರಕರಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಇದರಿಂದ ರೈತನಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಕಾಡಾನೆ ಜಮೀನಿಗೆ ನಿರಂತರವಾಗಿ ದಾಳಿ ಮಾಡುತ್ತಿರುವುದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ತಿಳಿಸಲು ದೂರವಾಣಿ ಕರೆ ಮಾಡಿದರೆ ಯಾರೊಬ್ಬರು ಕರೆ ಸ್ವೀಕರಿಸುತ್ತಿಲ್ಲ. ನಮ್ಮ ಕಷ್ಟವನ್ನು ಯಾರ ಜೊತೆ ಹೇಳಿಕೊಳ್ಳುವುದು ಎಂದು ರೈತ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಾಣಾಪಾಯದಿಂದ ಪಾರಾದ ನಾಲ್ವರು ರೈತರು: ಶುಕ್ರವಾರ ತಡರಾತ್ರಿ ಜಮೀನಿನಲ್ಲಿ ಬೆಳೆದಿದ್ದ ಬೆಳೆಯ ಸಂರಕ್ಷಣೆ ಮಾಡಲು ಮನೋಹರ್, ತಮಿಳ್ ಸೆಲ್ವ, ಮೈಲುಸ್ವಾಮಿ ಬಸವಣ್ಣ ತೆರಳಿದ್ದರು. ಈ ವೇಳೆ ಕಾಡಾನೆಗಳ ಹೆಚ್ಚು ಜಮೀನಿಗೆ ಲಗ್ಗೆ ಇಟ್ಟಿದೆ. ಕಾಡಾನೆಗಳನ್ನು ಓಡಿಸಲು ರೈತರು ಪ್ರಯತ್ನಿಸಿದ್ದಾರೆ ಆದರೆ ಮರಿಯ ಜೊತೆ ಇದ್ದ ತಾಯಾನೆ ರೈತರ ಮೇಲೆ ದಾಳಿ ನಡೆಸಿದೆ ಪರಿಣಾಮ ನಾಲ್ವರು ರೈತರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಹಲವಾರು ತಿಂಗಳಿನಿಂದ ಕಾಡಾನೆ ನಿರಂತರವಾಗಿ ದಾಳಿ ಮಾಡುತ್ತಿರುವ ಪರಿಣಾಮ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಡಾನೆ ಹಾವಳಿ ತಡೆಗಟ್ಟುವಂತೆ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಜಮೀನಿನಲ್ಲಿ ಸಾಲ ಮಾಡಿ ಬಾಳೆ ಬೆಳ್ಳುಳ್ಳಿ ಬೆಳೆದಿದ್ದೇನೆ. ಆದರೆ ಕಳೆದ ಐದು ದಿನಗಳಿಂದ ಆನೆಗಳು ಜಮೀನಿಗೆ ಬರುತ್ತಿರುವುದರಿಂದ ಎರಡು ಲಕ್ಷಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರು ಸ್ಪಂದಿಸುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಮಹಜರ್ ನಡೆಸಿ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು. ಇಲ್ಲದಿದ್ದರೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನೊಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





