ಬೆಂಗಳೂರು: ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಒಳನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಮತ್ತೆ ಕುಸಿತವಾಗಿದ್ದು, ಚಳಿಯ ತೀವ್ರತೆ ಹೆಚ್ಚಾಗಿದೆ. ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2 ರಿಂದ 3 ಡಿ.ಸೆ. ನಷ್ಟು ಕಡಿಮೆಯಾಗಿದೆ. ಚಳಿಯ ತೀವ್ರತೆ ಹೆಚ್ಚಿದ್ದು, ಶೀತಗಾಳಿ ಬೀಸುತ್ತಿರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹವಾಮಾನ ಇಲಾಖೆ ಸಲಹೆ ಮಾಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಬೀದರ್‍ನಲ್ಲಿ 6.3 ಡಿ.ಸೆ.ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ 21 ಜಿಲ್ಲಗಳಲ್ಲಿ ಕನಿಷ್ಠ ತಾಪಮಾನವು 10 ಡಿ.ಸೆ.ಗಿಂತ ಕಡಿಮೆ ದಾಖಲಾಗಿದೆ.
ಕರಾವಳಿ ಹೊರತುಪಡಿಸಿ ಉಳಿದ ಇತರೆ ಜಿಲ್ಲೆಗಳಲ್ಲೂ 15 ಡಿ.ಸೆ.ಗಿಂತ ಕಡಿಮೆ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ವಿಜಯಪುರ 7.8 ಡಿ.ಸೆ., ತುಮಕೂರು 7.9 ಡಿ.ಸೆ., ಬೆಳಗಾವಿ 8.1 ಡಿ.ಸೆ., ಬಾಗಲಕೋಟೆ 8.3 ಡಿ.ಸೆ., ಚಿಕ್ಕಬಳ್ಳಾಪುರ 8.4 ಡಿ.ಸೆ., ವಿಜಯನಗರ 8.5 ಡಿ.ಸೆ., ಹಾಸನ 8.7 ಡಿ.ಸೆ., ಬೆಂಗಳೂರು ಗ್ರಾಮಾಂತರ 9 ಡಿ.ಸೆ., ಕಲಬುರಗಿ 9.1 ಡಿ.ಸೆ., ಬೆಂಗಳೂರು ನಗರ 9.2 ಡಿ.ಸೆ., ಗದಗ 9.3 ಡಿ.ಸೆ., ಕೊಪ್ಪಳ 9.4 ಡಿ.ಸೆ., ಚಿಕ್ಕಮಗಳೂರು, ಮಂಡ್ಯ, ಮೈಸೂರು 9.5 ಡಿ.ಸೆ., ಧಾರವಾಡ 9.6 ಡಿ.ಸೆ., ಚಾಮರಾಜನಗರ 9.7 ಡಿ.ಸೆ.ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ.
ರಾಜ್ಯಾದ್ಯಂತ ಒಣ ಹವೆ ಕಂಡುಬರುತ್ತಿದ್ದು, ಮುಂಜಾನೆ ಚಳಿ ಹೆಚ್ಚಾಗಿರಲಿದೆ. ಕೆಲವೆಡೆ ಮಂಜು ಮುಸುಕಿದ ವಾತಾವರಣ ಕಂಡುಬರುವುದು ಸಾಮಾನ್ಯವಾಗಿದೆ. ತಾಪಮಾನ ಕುಸಿತದಿಂದ ಹಾಗೂ ಆಗಾಗ್ಗೆ ಬೀಸುವ ಶೀತಗಾಳಿಯಿಂದಾಗಿ ಚಳಿಯು ಹೆಚ್ಚಿದೆ.
ಮಕರ ಸಂಕ್ರಾಂತಿ ಹಬ್ಬದವರೆಗೂ ಮಾಗಿಯ ಚಳಿಯ ತೀವ್ರತೆ ಹೆಚ್ಚೂಕಡಿಮೆ ಇದೇ ರೀತಿ ಕಂಡುಬರಲಿದೆ ಎಂದು ಹೇಳಿದೆ.
ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಮುಂದಿನ ನಾಲ್ಕು ದಿನಗಳ ಕಾಲ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದ ಕೆಲವೆಡೆ ಮಳೆಯಾಗುವ ಮುನ್ಸೂಚನೆಗಳಿವೆ.
ನಾಳೆಯಿಂದ ಜ.12 ರವರೆಗೆ ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯಿದ್ದು, ಸದ್ಯಕ್ಕೆ ಎಲ್ಲೂ ಭಾರೀ ಮಳೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.





