ಮೈಸೂರು: ದಲಿತರೇ ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರಷ್ಟು ದಲಿತರಿಗೆ ಕಾರ್ಯಕ್ರಮ ಕೊಡುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.
ಈ ಕುರಿತು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಲ್ಲಾ ದಲಿತ ರಾಜಕಾರಣಿಗಳ ಬಗ್ಗೆ ಓದಿದ್ದೇನೆ. ಎಲ್ಲರನ್ನೂ ಹತ್ತಿರದಿಂದ ನೋಡಿದ್ದೇನೆ. ಸಿದ್ದರಾಮಯ್ಯ ಅವರು ದಲಿತರಿಗೆ ನೀಡಿರುವ ಕಾರ್ಯಕ್ರಮ ಅಷ್ಟೊಂದಿದೆ. ಸಿದ್ದರಾಮಯ್ಯ 2018ರಲ್ಲಿ ಸೋಲಲು ದಲಿತರಿಗೆ ನೀಡಿದ ಕಾರ್ಯಕ್ರಮಗಳೇ ಕಾರಣ. ದಲಿತರಿಗೆ ನೀಡಿದ ಕಾರ್ಯಕ್ರಮ ನೋಡಿ ಬೇರೆಯವರೆಲ್ಲ ಉರಿದುಕೊಂಡು ವಿರುದ್ಧವಾಗಿ ಮತ ಹಾಕಿದರು. ನನ್ನನ್ನು ದಲಿತ ಕೋಟಾದಲ್ಲಿ ಪರಿಷತ್ ಸದಸ್ಯ ಮಾಡಲಿಲ್ಲ. ಆ ರೀತಿ ಮಾಡಿದ್ದರೆ ತುಂಬಾ ನೊಂದುಕೊಂಡು ಬಿಡುತ್ತಿದ್ದೆ. ನಾನು ಬಾಲ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದರೆ ನನ್ನ ಬಾಲ್ಯ ಕ್ರೂರವಾಗಿರುತ್ತಿರಲಿಲ್ಲ. ಸಾಮಾಜಿಕ ಬಹಿಷ್ಕಾರದ ಕ್ರೂರತೆ ನೋಡಿ ಬೆಳೆದವನು ನಾನು. ಸಿಎಂ ಎರಡೂವರೆ ವರ್ಷ ಮುಗಿಸಿದ್ದಾರೆ. ನೀವು ಹೋದ ಮೇಲೆ ಬೇರೆಯವರು ದಲಿತರ ಪರ ಕೆಲಸ ಮಾಡುತ್ತಾರೆ ಅನ್ನೋ ನಂಬಿಕೆ ಇಲ್ಲ. ದಯಮಾಡಿ ಬ್ಯಾಕ್ ಲಾಗ್ ಹುದ್ದೆ ಹಾಗೂ ದಲಿತರಿಗೆ ಜಮೀನು ದಾಖಲಾತಿ ಕೊಡಿಸಿ. ಎಲ್ಲಾ ವಿವಿಗಳಲ್ಲಿ ಬುದ್ದಿಸಂನಲ್ಲಿ ಪದವಿ ಮಾಡಬೇಕು. ಇದು ಮಾಡದಿದ್ದರೆ ಆರ್‌ಎಸ್‌ಎಸ್ ತಡೆಯಲು ಆಗುವುದಿಲ್ಲ. ಬುದ್ದಿಸಂ ಕಲಿಸದಿದ್ದರೆ ಆರ್‌ಎಸ್‌ಎಸ್ ಬಗ್ಗು ಬಡಿಯಲು ಸಾಧ್ಯವಿಲ್ಲ. ಎಲ್ಲರನ್ನೂ ವೈಚಾರಿಕವಾಗಿ ಬೆಳೆಸಲು ಬುದ್ದಿಸಂ ಕಲಿಸಬೇಕು. ತಂದೆ ತಾಯಿ ಎಲ್ಲರ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಭ್ರಷ್ಟಾಚಾರ ಮಾಡುವುದಿಲ್ಲ. ಸಿದ್ದರಾಮಯ್ಯ ಮಹದೇವಪ್ಪ ಅವರಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡುವುದಿಲ್ಲ ಎಂದರು.





