Mysore
17
overcast clouds

Social Media

ಗುರುವಾರ, 08 ಜನವರಿ 2026
Light
Dark

ಮೈಸೂರಿನಲ್ಲಿ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ : ಜಿಲ್ಲಾಧಿಕಾರಿ ಮೆಚ್ಚುಗೆ

ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ಜಿ. ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನೂತನವಾಗಿ ಹೊರ ತಂದಿರುವ ಕ್ಯಾಲೆಂಡರ್‌ ಮತ್ತು ಡೈರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೈಸೂರಿನ ಪತ್ರಕರ್ತರು ಜಿಲ್ಲಾಡಳಿತದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಅಗತ್ಯ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಆಡಳಿತಾತ್ಮಕವಾಗಿ ಸಹಕಾರಿಯಾಗಿದ್ದಾರೆ ಎಂದು ನುಡಿದರು.

ತಪ್ಪುಗಳು ನಡೆದಾಗ ತಪ್ಪೆಂದು ಹೇಳುವ ಪತ್ರಕರ್ತರು, ತಪ್ಪುಗಳು ನಡೆಯದಂತೆ ಎಚ್ಚರ ವಹಿಸಲು ಸಹಕಾರಿಯಾಗಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಡಳಿತದ ವಿರುದ್ಧ ನಕಾರಾತ್ಮಕ ಧೋರಣೆ ಹೊಂದಿರುವುದು ಹೆಚ್ಚು ಕಂಡು ಬಂದರೆ, ಮೈಸೂರಿನಲ್ಲಿ ಸಕಾರಾತ್ಮಕ ಧೋರಣೆಯನ್ನು ಕಾಣಬಹುದು. ಇದು ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಡೈರಿ ಬಿಡುಗಡೆಗೊಳಿಸಿ ಮಾತನಾಡಿದ ಸಿದ್ಧಾರ್ಥ ಗ್ರೂಪ್ಸ್‌ ನ ಮೂಖ್ಯಸ್ಥರಾದ ಪಿ.ವಿ. ಗಿರಿ, ಕಳೆದ 27 ವರ್ಷಗಳಿಂದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದೊಂದಿಗಿನ ಒಡನಾಟವನ್ನು ಸ್ಮರಿಸಿದರಲ್ಲದೆ, ಪತ್ರಕರ್ತರ ಸಂಖ್ಯೆ ಹೆಚ್ಚಾದಂತೆ ಸಂಘದ ಚಟುವಟಿಕೆಯೂ ಹೆಚ್ಚಾಗಿದೆ. ಸದ್ಯ ಹಳೆ ಪತ್ರಕರ್ತರ ಭವನದಲ್ಲಿ ವಾಹನ ಸಂಚಾರಕ್ಕೆ ಮತ್ತು ಪಾರ್ಕಿಂಗ್‌ ಸಮಸ್ಯೆ ಇದ್ದು, ಶೀಘ್ರ ಹೊಸ ಭವನ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ‌ ಎಸ್.ಯುಕೇಶ್‌ ಕುಮಾರ್ ಮಾತನಾಡಿ, ಪತ್ರಕರ್ತರ ಸಹಕಾರದಿಂದ ಮಾತ್ರ ಜನರ ಜನರನ್ನು ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ನನ್ನ ಸೇವಾವಧಿಯಲ್ಲಿ ಅನೇಕ ಪತ್ರಕರ್ತರು ನಮಗೆ ಸಹಕಾರಿಯಾಗಿ ನಿಂತಿದ್ದಾರೆ. ಸಮಾಜ ಏಳಿಗೆಯಲ್ಲಿ ಪತ್ರಕರ್ತರ ಪಾತ್ರವೂ ಮುಖ್ಯ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಮೈಸೂರು ಪತ್ರಕರ್ತರು ವೃತ್ತಿಪರತೆ, ಬದ್ಧತೆಗೆ ಹೆಸರುವಾಸಿ. ಇಲ್ಲಿ ಸುಮಾರು 8೦ಕ್ಕೂ ಹೆಚ್ಚು ಅಧಿಕೃತ ಮಾಧ್ಯಮ ಸಂಸ್ಥಗಳಿವೆ. ಆದರೆ, ಯೂಟ್ಯೂಬ್ ಚಾನೆಲ್‌ಗಳ ಸಂಖ್ಯೆ ೧೭೫ನ್ನು ಮೀರುತ್ತಿದ್ದು, ನೈಜ ಪತ್ರಿಕೋದ್ಯಮ ಮತ್ತು ನೈಜ ಪತ್ರಕರ್ತರಿಗೆ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಾಲ, ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯ ಣ್‌, ಉಪಾಧ್ಯಕ್ಷ ರವಿ ಪಾಂಡವಪುರ, ಕಾರ್ಯದರ್ಶಿ ಕೃಷ್ಣೋಜಿ ರಾವ್‌, ಖಜಾಂಚಿ ಎನ್.‌ ಸುರೇಶ್‌, ಗ್ರಾ. ಕಾರ್ಯದರ್ಶಿ ದಾರಾ ಮಹೇಶ್‌, ಉಪಾಧ್ಯಕ್ಷ ವೆಂಕಟಪ್ಪ ಹಾಜರಿದ್ದರು. ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ನೂತನ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು. ಸಂಘದ ಉಪಾಧ್ಯಕ್ಷ ಹನಗೋಡು ನಟರಾಜ್‌ ಉಪಸ್ಥಿತರಿದ್ದರು.

Tags:
error: Content is protected !!