ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಅಂಚೆ ಕಚೇರಿಯಲ್ಲಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸೇರಿದಂತೆ ಅಲ್ಲಿನ ಸಿಬ್ಬಂದಿಗಳೇ ಷಾಮೀಲಾಗಿ ೭೫ ಮಂದಿ ಖಾತೆದಾರರ ಲಕ್ಷಾಂತರ ರೂ.ಗಳನ್ನು ದುರುಪಯೋಗ ಪಡಿಸಿಕೊಂಡಿದ್ದ ಪ್ರಕರಣ ಸುಮಾರು ೨-೩ ತಿಂಗಳ ಹಿಂದೆ ನಡೆದಿತ್ತು. ಆಗ ಇಲಾಖೆ ಅಧಿಕಾರಿಗಳು ಎಲ್ಲ ಖಾತೆದಾರರಿಗೂ ಇಲಾಖೆಯಿಂದಲೇ ಹಣ ಹಿಂದಿರುಗಿ ಸಲಾಗುವುದು ಎಂದು ಹೇಳಿದ್ದರು. ಆದರೆ ಇನ್ನೂ ಹಿಂದಿರುಗಿಸಿಲ್ಲ. ಇದೀಗ ಹಣ ಕಳೆದುಕೊಂಡವರು ಹಣ ಹಿಂತಿರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಲಾಖೆ ಅಧಿಕಾರಿಗಳು, ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ.
ಈ ಘಟನೆ ಅಂಚೆ ಕಚೇರಿಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ಇಲಾಖೆಯ ಉನ್ನತಾಧಿಕಾರಿಗಳು ಜನರ ಹಣವನ್ನು ಕೂಡಲೇ ಹಿಂದಿರುಗಿಸಿ, ಆಪಾದಿತ ನೌಕರರ ವೇತನದಿಂದ ಸದರಿ ಹಣವನ್ನು ವಸೂಲಿ ಮಾಡಿಕೊಳ್ಳುವ ಕೆಲಸವಾಗಲಿ. ಅಂಚೆ ಕಚೇರಿಗಳು ಜನರ ವಿಶ್ವಾಸ ಗಳಿಸಲು ಬಿಗಿ ಕ್ರಮ ಕೈಗೊಳ್ಳುವಂತಾಗಲಿ.
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು





