ರ‍್ಯಾಗಿಂಗ್ ಎಂಬ ಭೂತ ಶಾಲಾ ಮಟ್ಟಕ್ಕೂ ಕಾಲಿಟ್ಟಿರುವುದು ಆತಂಕಕಾರಿ ಸಂಗತಿಯಾಗಿದೆ. ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ ಇತ್ತೀಚೆಗೆ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗೆ ಹಣ ತರುವಂತೆ ಒತ್ತಡ ಹೇರಿದ್ದು, ಹಣ ತರದೇ ಇದ್ದಾಗ ಅವನ ಗುಪ್ತಾಂಗದ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ.
ಗಾಯಾಳು ವಿದ್ಯಾರ್ಥಿಯ ಪೋಷಕರು ಶಾಲೆಯ ಆಡಳಿತ ಮಂಡಳಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ನೊಂದ ವಿದ್ಯಾರ್ಥಿಯ ಆರೋಗ್ಯವನ್ನು ವಿಚಾರಿಸಿ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಆಡಳಿತ ಮಂಡಳಿಯು ನೋಡಿಕೊಳ್ಳಬೇಕು. ಪೋಷಕರಿಗೆ ಧೈರ್ಯ ಹೇಳಿ ಇನ್ನು ಮುಂದೆ ಹೀಗಾಗದಂತೆ ಭರವಸೆ ತುಂಬಬೇಕು.
ಶಾಲೆಯ ಎಲ್ಲಾ ಮಕ್ಕಳ ಚಲನವಲನಗಳನ್ನು ಗಮನಿಸಬೇಕು. ಶಿಸ್ತು ಉಲ್ಲಂಸಿ ದುರ್ವರ್ತನೆ ತೋರುವ ಹಾಗೂ ಬುದ್ಧಿವಾದ ಹೇಳಿದರೂ ವರ್ತನೆಯನ್ನು ತಿದ್ದಿಕೊಳ್ಳದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕಳುಹಿಸುವ ಮೂಲಕ ಉತ್ತಮ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಯದ್ದಾಗಿರುತ್ತದೆ.
– ಎಂ.ಎಸ್.ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು





