ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಕಟಿಸಿರುವ ೨೦೨೬ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರ ನೋಂದಣಿ ಮಾರ್ಗಸೂಚಿಗಳು ವಿದ್ಯಾರ್ಥಿ ಕೇಂದ್ರಿತ ಕ್ರಮವಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡಿರುವುದು ಶ್ಲಾಘನೀಯ. ಮೊಬೈಲ್ ಮೂಲಕ ಆನ್ ಲೈನ್‌ನಲ್ಲಿ ನೋಂದಣಿ ಮಾಡುವ ಅವಕಾಶ ನೀಡಿರುವುದೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
ಬಾಲಕಿಯರು, ಪರಿಶಿಷ್ಟ ವರ್ಗದವರು ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಿರುವುದೂ ಶ್ಲಾಘನೀಯ. ಆದರೆ, ಹಾಜರಾತಿ ಶೇಕಡಾ ೭೫ರ ಕಡ್ಡಾಯ ನಿಯಮವನ್ನು ಅನುಷ್ಠಾನಗೊಳಿಸುವಾಗ ವಿದ್ಯಾರ್ಥಿಗಳ ನೈಜ ಪರಿಸ್ಥಿತಿಯನ್ನೂ ಪರಿಗಣಿಸಬೇಕು. ಅನಾರೋಗ್ಯ, ಕುಟುಂಬ ಸಮಸ್ಯೆ ಅಥವಾ ಸಾರಿಗೆ ಸೌಕರ್ಯದ ಕೊರತೆಯಿಂದ ಹಾಜರಾತಿ ಕಡಿಮೆಯಾಗುವ ವಿದ್ಯಾರ್ಥಿಗಳಿಗೆ ವಿಶೇಷ ವಿನಾಯಿತಿ ನೀಡುವ ಕುರಿತು ಸರ್ಕಾರ ಚಿಂತಿಸಬೇಕು. ಆನ್‌ಲೈನ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಅಡಚಣೆಗಳು ಎದುರಾದರೆ, ಅದನ್ನು ನಿವಾರಿಸಲು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ.
-ಡಾ.ಎಚ್.ಕೆ .ವಿಜಯಕುಮಾರ್, ಬೆಂಗಳೂರು





