ಮೊದಲ ದಿನ ಸೌಹಾರ್ದತೆ; ಕೊನೆಯ ದಿನ ಭಾವೈಕ್ಯತೆ
ಗೊಂದಲ, ಗದ್ದಲವಿಲ್ಲದೆ ಅಚ್ಚುಕಟ್ಟಾಗಿ ನಡೆದ ಮಹೋತ್ಸವ
ಕೆ.ಬಿ.ರಮೇಶನಾಯಕ
ಮೈಸೂರು: ಲಕ್ಷಾಂತರ ಮನಸ್ಸುಗಳಿಗೆ ಮುದ ನೀಡಿದ ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವ ಸಂಪನ್ನಗೊಂಡಿದ್ದು, ದಸರಾ ಮಹೋತ್ಸವ ಉದ್ಘಾಟಿಸಿದ ಬಾನು ಮುಷ್ತಾಕ್ ಅವರು ಸೌಹಾರ್ದತೆಯ ಸಂದೇಶವನ್ನು ಸಾರಿದರೆ, ಗಾಂಧಿ ಜಯಂತಿ ದಿನ ದಂದು ನಡೆದ ಜಂಬೂಸವಾರಿ ಭಾವೈಕ್ಯತೆಯ ಭಾವವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಗಾಂಧಿ ಜಯಂತಿ ದಿನವೇ ಜಂಬೂಸವಾರಿ ಮೆರವಣಿಗೆ ಇದ್ದುದರಿಂದ ಬಹುತೇಕ ಸ್ತಬ್ಧಚಿತ್ರಗಳು ಗಾಂಧೀಜಿ ಸತ್ಯಾಗ್ರಹ, ಅಹಿಂಸಾ ಚಳವಳಿ, ಉಪ್ಪಿನ ಸತ್ಯಾಗ್ರಹ ಸೇರಿದಂತೆ ಭಾವೈಕ್ಯತೆಯ ವಿಚಾರ, ಸಂದೇಶಗಳನ್ನು ಪ್ರತಿಪಾದಿಸಿದವು.
ಈ ಬಾರಿಯ ದಸರಾ ಮಹೋತ್ಸವದ ಅಂತಿಮ ದಿನವಾದ ಜಂಬೂ ಸವಾರಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲದಿರುವುದು ಸಮಾಧಾನಕರ ಸಂಗತಿ. ಈ ಸಂಬಂಧ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಜಂಬೂಸವಾರಿ ಮೆರವಣಿಗೆ ವೇಳೆ ಅನಗತ್ಯವಾಗಿ ಉಂಟಾಗುತ್ತಿದ್ದ ಗೊಂದಲ, ಗದ್ದಲವನ್ನು ತಡೆಯಲು ಜಿಲ್ಲಾಡಳಿತ, ನಗರ ಪೊಲೀಸರು ಹಣೆದ ಕಾರ್ಯತಂತ್ರ ಯಶಸ್ವಿಯಾಗಿದೆ. ಅರಮನೆ ಆವರಣದಲ್ಲಿ ಪ್ರೇಕ್ಷಕರ ಒತ್ತಡ ತಪ್ಪಿಸಲು ಜಿಲ್ಲಾಡಳಿತ, ಈ ಬಾರಿ ೧೧ ಸಾವಿರ ಆಸನಗಳನ್ನು ಕಡಿತಗೊಳಿಸಿ, ೪೮ ಸಾವಿರ ಆಸನಗಳ ವ್ಯವಸ್ಥೆ ಮಾಡಿತ್ತು. ಇದರಿಂದ ಯಾವುದೇ ಗೊಂದಲ ಉಂಟಾಗಲಿಲ್ಲ. ಆದರೆ ಪಾಸ್ ಹೊಂದಿದ್ದ ಸಾವಿರಾರು ಮಂದಿ ೧೨ ಗಂಟೆ ನಂತರ ಅರಮನೆ ಆವರಣ ಪ್ರವೇಶಕ್ಕೆ ಮುಂದಾಗಿದ್ದರಿಂದ ಪೊಲೀಸರು ಅವಕಾಶ ನೀಡಲಿಲ್ಲ.
ಪ್ರತಿವರ್ಷ ಅಂಬಾರಿ ಕಟ್ಟುವುದು, ಪುಷ್ಪಾರ್ಚನೆಗೆ ಆನೆ ಕರೆತರುವುದು ವಿಳಂಬವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರಿಂದ ಈ ಬಾರಿ ಜಿಲ್ಲಾಧಿಕಾರಿಗಳೇ ಮುತುವರ್ಜಿವಹಿಸಿ ಸಕಾಲಕ್ಕೆ ಅಂಬಾರಿ ಹಸ್ತಾಂತರವಾಗುವಂತೆ ನೋಡಿಕೊಂಡಿದ್ದರು. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಿಗದಿತ ಸಮಯಕ್ಕೆ ಪುಷ್ಪಾರ್ಚನೆಗೆ ಗಜಪಡೆಯನ್ನು ಕರೆತರಲು ಸಫಲರಾದರು. ಮೆರವಣಿಗೆ ವೇಳೆ ಉಪ ಸಮಿತಿ ಸದಸ್ಯರಿಗೆ ನಿರ್ಬಂಧ ಹೇರಿದ್ದರಿಂದ್ದ ಸ್ತಬ್ಧಚಿತ್ರಗಳು, ಜಾನಪದ ಕಲಾತಂಡಗಳು ಕಿರಿಕಿರಿ ಇಲ್ಲದೆ ಸಾಗಿದವು.
ಜನರ ಮನ ಗೆದ್ದ ಕ್ಯಾಪ್ಟನ್ ಅಭಿಮನ್ಯು ಜತೆಗೆ ಮೊದಲ ಬಾರಿಗೆ ಹದಿನಾಲ್ಕು ಆನೆಗಳು ಅರಮನೆಯಿಂದ ಬನ್ನಿಮಂಟಪದ ತನಕ ಹೆಜ್ಜೆ ಸ್ವಲ್ಪವೂ ವಿಚಲಿತವಾಗದೆ ಹೆಜ್ಜೆ ಹಾಕಿದರೆ. ಭವಿಷ್ಯದ ಗಜಪಡೆ ನಾಯಕ ಭೀಮ ಆನೆಯು ಪ್ರೇಕ್ಷಕರ ಗಮನ ಸೆಳೆಯಿತು. ದಸರಾ ಆರಂಭವಾದರೂ ಅನುದಾನದ ಕೊರತೆ ಎದುರಿಸುತ್ತಿದ್ದ ಉಪ ಸಮಿತಿಗಳಿಗೆ ಈ ಬಾರಿ ಬೇಗನೆ ಹಣ ಬಿಡುಗಡೆ ಮಾಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯಶಸ್ವಿಯಾದರು.
ಆರನೇ ಬಾರಿಗೆ ದಸರಾ ಮಹೋತ್ಸವದ ಹೊಣೆ ಹೊತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಜಿಲ್ಲಾಡಳಿತಕ್ಕೆ ಸಂಪೂರ್ಣ ಹೊಣೆ ವಹಿಸಿದ್ದರು. ಅದರಂತೆ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ನೇತೃತ್ವದ ತಂಡ ಒಂದು ತಿಂಗಳಿಂದ ಪ್ರತಿಯೊಂದು ಉಪ ಸಮಿತಿಗಳ ಕಾರ್ಯಕ್ರಮಗಳೂ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡಿತ್ತು. ಉಪ ಸಮಿತಿಯ ಜವಾಬ್ದಾರಿ ಹೊತ್ತ ಅಧಿಕಾರಿಗಳು ಅಧಿಕಾರೇತರ ಸಮಿತಿಯನ್ನು ನಿಯೋಜಿಸುವ ಹೊತ್ತಿಗೆ ಸಣ್ಣ ಆರೋಪಗಳಿಗೂ ಎಡೆಮಾಡಿಕೊಡದೆ ಕೆಲಸ ಮುಗಿಸಿದ್ದರಿಂದ ಸರ್ಕಾರದ ಮೆಚ್ಚುಗೆಗೆ ಕಾರಣವಾಗಿದ್ದಾರೆ.





