ದೇಶದ ಹಾಗೂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಸಾಧನೆ ಮಾಡಿರುವ ಗಣ್ಯರಿಗೆ ನೀಡುವುದು ಸಂಪ್ರದಾಯ. ಈ ಗೌರವಗಳನ್ನು ಕೆಲವರಿಗೆ ಜೀವಿತಾವಧಿಯಲ್ಲಿ ನೀಡಿದರೆ, ಮತ್ತೆ ಕೆಲವರಿಗೆ ಮರಣೋತ್ತರ ವಾಗಿ ನೀಡಲಾಗುತ್ತದೆ. ಹಿರಿಯ ನಟ ಡಾ. ವಿಷ್ಣುವರ್ಧನ್ ಮತ್ತು ಅಭಿನಯ ಶಾರದೆ ಎನಿಸಿದ ನಟಿ ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಮರಣೋತ್ತರವಾಗಿ ಪ್ರಶಸ್ತಿ ನೀಡಿದರೆ ಅದರ ಪ್ರಯೋಜನವೇನು? ಎಂಬ ಪ್ರಶ್ನೆ ಹಲವರಲ್ಲಿದೆ. ಪ್ರಶಸ್ತಿ ಎಂದರೆ ಅದು ಕೇವಲ ಒಂದು ಗೌರವದ ಪದಕ ಅಥವಾ ಪ್ರಮಾಣ ಪತ್ರವಲ್ಲ. ವ್ಯಕ್ತಿಯ ಸಾಧನೆಯನ್ನು ರಾಷ್ಟ್ರ ಅಥವಾ ರಾಜ್ಯವು ಗುರುತಿಸಿದ ಅಧಿಕೃತ ಮುದ್ರೆಯಾಗಿದೆ. ಬದುಕಿರುವಾಗ ಪ್ರಶಸ್ತಿ ಸ್ವೀಕರಿಸುವುದು ಸಂತೋಷದ ವಿಷಯ. ಆದರೆ, ಮರಣೋತ್ತರವಾಗಿ ನೀಡುವ ಪ್ರಶಸ್ತಿಯು ಆ ವ್ಯಕ್ತಿಯು ದೇಶಕ್ಕೆ ಅಥವಾ ರಾಜ್ಯಕ್ಕೆ ಸಲ್ಲಿಸಿದ ಅಸಾಧಾರಣ ಸೇವೆಗಳಿಗೆ ಕೃತಜ್ಞತೆಯ ಸಂಕೇತವಾಗಿದೆ.
ಆ ವ್ಯಕ್ತಿ ಇಲ್ಲದಿದ್ದರೂ, ಅವರ ಗೌರವ ಮತ್ತು ನೆನಪು ಶಾಶ್ವತವಾಗಿ ಉಳಿಯುತ್ತದೆ. ಮರಣೋತ್ತರವಾಗಿ ನೀಡಿದ ಪ್ರಶಸ್ತಿಗಳು ಮುಂದಿನ ಪೀಳಿಗೆಗೆ ಸೂರ್ತಿಯಾಗುತ್ತವೆ.
-ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು





