Mysore
27
clear sky

Social Media

ಬುಧವಾರ, 21 ಜನವರಿ 2026
Light
Dark

ಡಿಸಿಎಂ ಡಿ.ಕೆ.ಶಿವಕುಮಾರ್ ಹಿಂದೂಗಳ ಕ್ಷಮೆ ಯಾಚಿಸಬೇಕು : ಆರ್.ಅಶೋಕ ಆಗ್ರಹ

dk shiv kumar (3)

ಬೆಂಗಳೂರು : ಚಾಮುಂಡೇಶ್ವರಿ ದೇವಾಲಯ ಹಿಂದೂಗಳ ಆಸ್ತಿ ಅಲ್ಲ ಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಕೂಡಲೇ ಅವರು ಹಿಂದೂಗಳ ಬಳಿ ಕ್ಷಮೆ ಯಾಚಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಅಪಮಾನ ಮಾಡುತ್ತಿದೆ. ಧರ್ಮಸ್ಥಳದಿಂದ ಚಾಮುಂಡೇಶ್ವರಿ ದೇವಾಲಯದವರೆಗೂ ಈ ಕೃತ್ಯ ನಡೆಯುತ್ತಿದೆ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುವುದಾದರೆ, ಅದೇನು ವಕ್ಫ್ ಮಂಡಳಿಯ ಆಸ್ತಿಯೇ? ಅಲ್ಲಿ ಯಾವಾಗ ಗೋರಿ ಕಟ್ಟುತ್ತಾರೆ ಎಂದು ಕೇಳಬೇಕಿದೆ ಎಂದರು.

ಮೈಸೂರು ಮಹಾರಾಜರು ಚಾಮುಂಡೇಶ್ವರಿಯನ್ನು ಕುಲದೇವತೆಯಾಗಿ ಪೂಜಿಸಿಕೊಂಡು ಬಂದಿದ್ದಾರೆ. ಇಂತಹ ಇತಿಹಾಸವಿರುವ ದೇವರನ್ನು ಹಿಂದೂ ದೇವರಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ಮಾಡುತ್ತಿದೆ. ಚಾಮುಂಡಿ ಬೆಟ್ಟದ ದೇವಾಲಯ ಯಾರ ಆಸ್ತಿ? ವಕ್ಫ್ ಮಂಡಳಿ, ಮಸೀದಿ, ಚರ್ಚ್ ಗಳನ್ನು ಯಾರಿಗೂ ಬಿಟ್ಟು ಕೊಡಲ್ಲ. ಆದರೆ ಹಿಂದೂ ದೇವಾಲಯ ಮಾತ್ರ ಎಲ್ಲರಿಗೂ ಸೇರಿದೆ ಎನ್ನುತ್ತಾರೆ. ಈ ದೇವಾಲಯವನ್ನು ಮುಟ್ಟಿದರೆ ಇಡೀ ರಾಜ್ಯದಲ್ಲಿ ದಂಗೆಯಾಗುತ್ತದೆ. ಹಿಂದೂಗಳ ಭಾವನೆಯನ್ನು ಕೆಣಕದೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ದಸರಾ ಹಬ್ಬವನ್ನು ಒಡೆಯರ್ ರಾಜವಂಶಸ್ಥರು ಆಚರಿಸಿಕೊಂಡು ಬಂದಿದ್ದಾರೆ. ಇಲ್ಲಿಗೆ ಬಂದ ಮುಸ್ಲಿಂ ದೊರೆಗಳು ದೇವಾಲಯಗಳನ್ನು ಒಡೆದುಹಾಕಿದ್ದರು‌. ಈಗ ಸಾಹಿತಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಲಾಗಿದೆ. ಕನ್ನಡ ಭುವನೇಶ್ವರಿ ದೇವಿಯ ಬಗ್ಗೆ ಇವರು ಮಾತಾಡುತ್ತಾರೆ. ಇನ್ನೇನು ಪಾಕಿಸ್ತಾನದ ಮಾತೆ ಮಾಡಬೇಕಿತ್ತೇ? ಕನ್ನಡಿಗರು ಮಾತ್ರವಲ್ಲ, ಎಲ್ಲ ಭಾರತೀಯರು ಭಾಷೆಯನ್ನು ತಾಯಿಯಾಗಿಯೇ ಕಾಣುತ್ತಾರೆ. ಇವರು ಹೇಳುವಂತೆ ಅರಿಶಿನ ಕುಂಕುಮ ಹಾಕದೆ ಅತ್ತರ್‌ ಹಾಕಲು ಸಾಧ್ಯವಿಲ್ಲ. ದಸರಾ ಉದ್ಘಾಟನೆಯಲ್ಲೂ ಅರಿಶಿನ ಕುಂಕುಮ ಬಳಸುತ್ತಾರೆ. ಆಗ ಕುಂಕುಮವನ್ನು ಹಾಗೂ ಭುವನೇಶ್ವರಿಯನ್ನು ಬೈದವರು ಈಗ ಹೇಗೆ ಚಾಮುಂಡಿಯನ್ನು ಪೂಜೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಚಾಮುಂಡೇಶ್ವರಿ ಇವರನ್ನು ಕರೆಯುತ್ತಿದ್ದಾರೆ ಎನ್ನುತ್ತಾರೆ. ಆದರೆ ಇವರನ್ನು ಮಸೀದಿಯವರೂ ಕರೆಯಲ್ಲ. ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಕವಿ ನಿಸಾರ್ ಅಹ್ಮದ್ ಬಗ್ಗೆ ಯಾರೂ ಮಾತಾಡಲ್ಲ. ನಾನು ಕಂದಾಯ ಸಚಿವನಾಗಿದ್ದಾಗ ಅವರ ಹೆಸರಲ್ಲಿ ಸಂಸ್ಥೆ ‌ನಿರ್ಮಿಸಲು ಐದೆಕರೆ ಜಮೀನು ಮಂಜೂರು ಮಾಡಿಸಿದ್ದೆ. ಜೋಗದ ಸಿರಿಯ ಕವನ ಬರೆದು ಅವರು ತಾಯಿ ನಿನಗೆ ನಿತ್ಯೋತ್ಸವ ಎಂದಿದ್ದರು. ಅವರು ಎಂದಿಗೂ ಯಾವುದೇ ಧರ್ಮದ ವಿರುದ್ಧವಾಗಿ ಮಾತಾಡಲಿಲ್ಲ. ಅಂತಹವರಿಗೆ ಬಾನು ಮುಷ್ತಾಕ್ ಅವರನ್ನು ಹೋಲಿಸುವುದೇಕೆ ? ನಿಸಾರ್ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ ಎಂದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಕುರುಬ, ಒಕ್ಕಲಿಗರಲ್ಲಿ ಯಾರೂ ಸಾಧಕರು ಸಿಕ್ಕಿಲ್ಲವೇ? ಕಾಂಗ್ರೆಸ್ ದಸರಾ ಪೂಜೆ ಮಾಡದೆ ವೋಟಿನ ಪೂಜೆ ಮಾಡುತ್ತಿದೆ. ಇನ್ನಾದರೂ ಒಬ್ಬ ಸಾಧಕರು, ಯೋಧರನ್ನು ಗುರುತಿಸಿ ಅವಕಾಶ ನೀಡಲಿ. ಬಾನು ಮುಷ್ತಾಕ್ ಬರೆದ ಎದೆಯ ಹಣತೆಗೆ ಬೂಕರ್ ಪ್ರಶಸ್ತಿಯಲ್ಲಿ ಮತ್ತೊಬ್ಬರ ಪಾಲು ಇದೆ. ಆದರೆ ಅವರನ್ನು ಆಹ್ವಾನಿಸಿಲ್ಲ. ಇದು ಅಲ್ಪಸಂಖ್ಯಾತರ ಸರ್ಕಾರ ಆಗಿರುವುದು ಖಂಡನೀಯ ಎಂದರು.

ಪ್ರತ್ಯೇಕ ಕಾನೂನು
ಯದುವೀರರ ವಂಶಸ್ಥರನ್ನು ಟಿಪ್ಪು ಕುಟುಂಬದವರು ಬಂಧನದಲ್ಲಿರಿಸಿದ್ದರು. ಅಂತಹವರನ್ನೇ ಮತ್ತೆ ಕರೆದುಕೊಂಡು ಬಂದು ತಾಯಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ. ಮುಂದೆ ಬಿಜೆಪಿ ಸರ್ಕಾರ ಬಂದ‌ ನಂತರ ಉದ್ಘಾಟನೆ ಮಾಡುವ ಕುರಿತು ಕಾನೂನು ತರಲಾಗುವುದು ಎಂದರು.

ಧರ್ಮ ರಕ್ಷಣಾ ಸಮಾವೇಶ
ಸಿಎಂ ಸಿದ್ದರಾಮಯ್ಯ ಸುತ್ತ ಇರುವ ಪ್ರಗತಿಪರರು ಧರ್ಮಸ್ಥಳ ದೇವಾಲಯವನ್ನು ಕಿತ್ತುಕೊಂಡು ಲೂಟಿ ಹೊಡೆಯಲು ಯೋಜನೆ ರೂಪಿಸಿದ್ದಾರೆ. ಹಿಂದೆ ಘಜನಿ ಮಾಡಿದಂತೆಯೇ ಕಾಂಗ್ರೆಸ್ ಸರ್ಕಾರ ಲೂಟಿ ಮಾಡಲು ಮುಂದಾಗಿದೆ. ಮಂಜುನಾಥ ಸ್ವಾಮಿಗೆ ಕೆಟ್ಟ ಹೆಸರು ತರಲು ಎರಡು ವರ್ಷ ತಯಾರಿ ನಡೆಸಲಾಗಿದೆ. ಎಸ್ಐಟಿಗೆ 3-5 ಕೋಟಿ ರೂ. ಖರ್ಚಾಗಿದೆ. ಧರ್ಮವನ್ನು ರಕ್ಷಣೆ ಮಾಡಲು ಸೆಪ್ಟೆಂಬರ್ 1 ರಂದು ಸಮಾವೇಶ ಮಾಡಲಿದ್ದೇವೆ ಎಂದು ತಿಳಿಸಿದರು.

Tags:
error: Content is protected !!