Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ತೆಲುಗು ರಾಜ್ಯಗಳಲ್ಲಿ ಹೊಸ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’

kanthara

ಜೂನಿಯರ್ NTR ಅಭಿನಯದ ಮೊದಲ ಹಿಂದಿ ಚಿತ್ರ ‘ವಾರ್ 2’ನ ತೆಲುಗು ಹಕ್ಕುಗಳಿಗಾಗಿ (ಡಬ್ಬಿಂಗ್‍ ಮತ್ತು ಆಂಧ್ರ ಪ್ರದೇಶ ಹಾಗೂ ತೆಲಂಗಾಣ ವಿತರಣೆ) ನಿರ್ಮಾಪಕ ನಾಗವಂಶಿ, 80 ಕೋಟಿ ರೂ. ನೀಡಿದ್ದರು ಎಂದು ಕೆಲವು ತಿಂಗಳುಗಳ ಸುದ್ದಿಯಾಗಿತ್ತು. ಅದಕ್ಕೂ ಮುನ್ನ ಯಾವುದೇ ಚಿತ್ರಕ್ಕೂ ಇಷ್ಟೊಂದು ವಹಿವಾಟು ನಡೆಯದ ಕಾರಣ, ಇದು ದಾಖಲೆಯಾಗಿತ್ತು.

ಈಗ ಆ ದಾಖಲೆಯನ್ನು ‘ಕಾಂತಾರ – ಚಾಪ್ಟರ್ 1’ ಮುರಿದಿದೆ ಎಂದು ಹೇಳಲಾಗುತ್ತಿದೆ. ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಚಿತ್ರವು ಅಕ್ಟೋಬರ್ 02ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಚಿತ್ರಕ್ಕೆ ಭಾರೀ ಬೇಡಿಕೆ ಬಂದಿದ್ದು, ಎರಡೂ ರಾಜ್ಯಗಳೀಗೆ ಸೇರಿ ಡಬ್ಬಿಂಗ್‍ ಮತ್ತು ವಿತರಣಾ ಹಕ್ಕುಗಳು 100 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಈ ಪೈಕಿ, ನಿಜಾಮ್ ಪ್ರದೇಶಕ್ಕೆ 40 ಕೋಟಿ, ಕರಾವಳಿ ಆಂಧ್ರಕ್ಕೆ 45 ಕೋಟಿ ರೂ ಮತ್ತು ರಾಯಲಸೀಮೆ ಪ್ರದೇಶಗಳ ವಿತರಣಾ ಹಕ್ಕುಗಳು 15 ಕೋಟಿ ರೂ.ಗಳಿಗೆ ಮಾರಾಟವಾಗಿದೆಯಂತೆ. ಈ ಬಗ್ಗೆ ಚಿತ್ರ ನಿರ್ಮಿಸಿರುವ ಹೊಂಬಾಳೆ ಫಿಲಂಸ್‍ ಆಗಲೀ, ಹಕ್ಕುಗಳನ್ನು ಪಡೆದ ವಿತರಕರಾಗಲೀ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇದು ನಿಜವಾದರೆ, ಹೊಸ ದಾಖಲೆಯಾಗುತ್ತದೆ.

‘ಕಾಂತಾರ – ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್‍ ಬ್ಯಾನರ್ ಅಡಿ ವಿಜಯ್‍ ಕಿರಗಂದೂರು ನಿರ್ಮಿಸುತ್ತಿದ್ದು, ರಿಷಭ್‍ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್‍ ದೇವಯ್ಯ, ಅಚ್ಯುತ್‍ ಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಕಾಂತಾರ ಚಾಪ್ಟರ್ 1’ ಚಿತ್ರವು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.

Tags:
error: Content is protected !!