ಬೆಂಗಳೂರು : ಪರಿಶಿಷ್ಟ ಸಮುದಾಯಕ್ಕೆ ಒಳ ಮೀಸಲಾತಿಯ ಭಾಗ್ಯ ನೀಡಿದ್ದ ಸಿದ್ದರಾಮಯ್ಯ ಸರ್ಕಾರ, ಇದೀಗ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ಪರಿಶಿಷ್ಟ ಒಳಮೀಸಲಾತಿ ಜಾರಿ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಹೊರಬಿದ್ದಿದೆ. ಇದರ ಅನ್ವಯ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಸೂಚನೆ ನೀಡಿದೆ.
ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ಹಂಚಿಕೆ ಮಾಡಿ ಸರ್ಕಾರ ಆದೇಶಿಸಿದ್ದು, ಇದೀಗ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಶೇಕಡಾ 6, ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಶೇಕಡಾ 6 ಮತ್ತು ಸ್ಪೃಶ್ಯ ಹಾಗೂ ಅಲೆಮಾರಿ ಸಮುದಾಯಕ್ಕೆ ಶೇಕಡಾ 5ರಷ್ಟು ಮೀಸಲಾತಿ ಹಂಚಿಕೆ ಮಾಡಿದ್ದು, ಇದರ ಅನ್ವಯ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಆದೇಶ ನೀಡಿದೆ.
ಯಾರಿಗೆ ಎಷ್ಟು ಮೀಸಲಾತಿ?
ಎಡಗೈಗೆ 6%, ಬಲಗೈಗೆ 6%, ಲಂಬಾಣಿ, ಭೋವಿ ಕೊರಚ ಕೊರಮ, ಅಲೆಮಾರಿ ಸೇರಿದಂತೆ ಇತರೆ ಉಪಪಂಗಡಗಳಿಗೆ 5% ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಈ ಹಿಂದೆ ಎಡಗೈಗೆ 6%, ಬಲಗೈಗೆ 5%, ಲಂಬಾಣಿ ಭೋವಿ ಸಮುದಾಯಕ್ಕೆ 4%, ಅಲೆಮಾರಿಗಳಿಗೆ 1%, ಆದಿ ಕರ್ನಾಟಕ, ಅದಿ ದ್ರಾವಿಡ ಸಮುದಾಯಗಳಿಗೆ 1% ಮೀಸಲಾತಿಗೆ ನಾಗಮೋಹನ್ ದಾಸ್ ಆಯೋಗ ಶಿಫಾರಸ್ಸು ಮಾಡಿತ್ತು.
ಎಡಗೈ, ಬಲಗೈ ಸಮುದಾಯದ ಮನವೊಲಿಸಿದ ಸಿಎಂ
ಅಲೆಮಾರಿ, ಆದಿ ಕರ್ನಾಟಕ, ಆದಿ ದ್ರಾವಿಡ ಪಂಗಡಗಳ ಮೀಸಲಾತಿ ನಮಗೆ ಕೊಡಿ ಎಂದು ಬಲಗೈ, ಲಂಬಾಣಿ ಭೋವಿ ಸಮಾಜ ಒತ್ತಾಯಿಸಿದ್ದವು. ಅಂತಿಮವಾಗಿ ಐದು ಪ್ರವರ್ಗಗಳ ಬದಲು ಮೂರು ಪ್ರವರ್ಗಗಳನ್ನಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಲಾಗಿತ್ತು. ಈ ಪ್ರಕಾರ ಎಡಗೈ, ಬಲಗೈ ಸಮುದಾಯಗಳಿಗೆ ತಲಾ 6% ಮೀಸಲಾತಿ ಹಂಚಿಕೆ ಮಾಡಲು ಸರ್ಕಾರ ತೀರ್ಮಾನ ಮಾಡಿತ್ತು. ಈ ಮೂಲಕ ಎರಡೂ ಸಮುದಾಯಗಳ ಸಮಾಧಾನ ಪಡಿಸಿ ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದರು.





