ಪ್ರವಾಸಿಗರ ಮುದಗೊಳಿಸುವ ವಿರಾಜಪೇಟೆಯ ತಾಣ
ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುವ ಮಾರ್ಗಮಧ್ಯೆ ಇರುವ ಚಿಕ್ಲಿಹೊಳೆ ಜಲಾಶಯ ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ.
ಅಂದರೆ ಸ್ವಾಭಾವಿಕವಾದ ಹಸಿರನ್ನು ಹೊದ್ದುಕೊಂಡು ಕಿನ್ನರಿಯಂತೆ, ಮತ್ತೊಮ್ಮೆ ತನ್ನೊಳಗೆ ರಾಶಿ ರಾಶಿ ಮಾತುಗಳಿದ್ದರೂ ಮೌನವೇ ಈ ಕ್ಷಣ ನಾನಾಡುವ ಅತ್ಯಂತ ದೊಡ್ಡ ಮಾತು ಎಂದು ತಣ್ಣಗೆ ನಸುನಕ್ಕು ಹೊಳೆಯುವ ನಿಸರ್ಗ ಸಿರಿ ನೋಡುಗರ ಕಣ್ಮನ ಸೆಳೆಯುತ್ತದೆ. “ಅಲ್ಲಿ ಬಳಿ ಫಾಸಲೆಯಲಿ ದನಗಳ ಅಂಬಾ ಎಂಬ ದನಿಯು, ದನ ಕಾಯುವನ ಕೊರಳೊಡನೆ ಬರಲಿ” ಎನ್ನುವ ಕುವೆಂಪು ಅವರ ಕವಿತೆಯ ಸಾಲುಗಳು ಪ್ರಕೃತಿಯ ಅನುಸಂಧಾನ ಮಾಡುವಾಗಲೆಲ್ಲಾ ಕಾಡುವ ಹಾಗೆ, ಮನದ ಮೂಲೆಯಲ್ಲಿ ಬೆಚ್ಚಗಿರುವ ಕವಿತೆಯ ಸಾಲುಗಳು ನಿಜಕ್ಕೂ ಕಣ್ಣೆದುರು ಅವತರಿಸಿದಾಗ ಆಗುವ ಸಾರ್ಥಕತೆ ಇದೆಯಲ್ಲಾ ಅದು ಎಲ್ಲವನ್ನೂ ಮೀರಿದ್ದು, ಆ ಸಾರ್ಥಕತೆ ಉಸಿರೊಳಗೆ ಕೊಂಚ ಹಸಿರು ತುಂಬಿಸಿಕೊಂಡ ಕವಿ ಮನಸ್ಸಿಗೆ, ಭಾವಜೀವಿಗಳಿಗೆ ಮಾತ್ರ ಅರ್ಥವಾಗಲು ಸಾಧ್ಯ.
ಇಲ್ಲಿನ ಕಾನನ ಹಾಗೂ ಕಾಫಿ ತೋಟಗಳ ನಡುವೆ ಹರಿಯುವ ಕಿರಿದಾದ ತೊರೆಗೆ ಕಟ್ಟಿರುವ ಅಣೆಕಟ್ಟೆಯೇ ಚಿಕ್ಲಿಹೊಳೆ ಜಲಾಶಯವಾಗಿದೆ. ಕುಶಾಲನಗರದಿಂದ ವಿರಾಜಪೇಟೆ ಮಾರ್ಗದಲ್ಲಿ ರಂಗಸಮುದ್ರ ಎಂಬ ಗ್ರಾಮದಿಂದ ಬಲಕ್ಕೆ ಕಾಡನ್ನು ಸೀಳಿ ಸಾಗಿರುವ ಅರಣ್ಯದೊಳಗಿನ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಕಾಣಸಿಗುವುದೇ ಚಿಕ್ಲಿಹೊಳೆ ಜಲಧಾರೆ.
ಮಳೆಗಾಲದ ಅವಧಿಯಲ್ಲಿ ಸುಮಾರು ಆರು ತಿಂಗಳ ಕಾಲ ಜಲಾಶಯದ ಸುತ್ತಲಿನ ಸುಂದರವಾದ ಹಸಿರು ಪರಿಸರ ಹಾಗೂ ಜಲಧಾರೆಯ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ -ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದು ಸಾಮಾನ್ಯ ಸಂಗತಿಯಾಗಿದೆ.
ಮಳೆಗಾಲದಲ್ಲಿ ಮಳೆ ಸುರಿವಾಗಲಂತೂ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಕಾವೇರಿ ನದಿಗೆ ಹರಿಯುವಾಗ ಸುರುಳಿಯಾಕಾರದಲ್ಲಿ,ಅರ್ಧ ಚಂದ್ರಾಕೃತಿಯಲ್ಲಿ ಇಲ್ಲಿ ನೀರು ಹಾಲ್ನೊರೆ ಸೂಸಿ ಹೊರಹರಿಯುವ ಚೆಲುವನ್ನು ನೋಡುವುದೇ ಒಂದು ವಿಸ್ಮಯ.
ಹಾಗಾಗಿ ಒಮ್ಮೆ ನೋಡಿದವರು ಮತ್ತೊಮ್ಮೆ, ಮಗದೊಮ್ಮೆ ನೋಡಲು, ಇಲ್ಲಿನ ನಿಸರ್ಗ ಸೌಂದರ್ಯವನ್ನು ಮನತುಂಬಿಕೊಳ್ಳಲು ಧಾವಿಸುತ್ತಿದ್ದಾರೆ. ದೂರದ ನಗರ ಪಟ್ಟಣ ಪ್ರದೇಶಗಳಲ್ಲಿ ಐಟಿ ಬಿಟಿ ಉದ್ಯೋಗದಲ್ಲಿರುವ ನೂರಾರು ಮಂದಿ ತಮ್ಮ ಮನಶ್ಶಾಂತಿಗಾಗಿ ಹಾಗೂ ಆತ್ಮತೃಪ್ತಿಗಾಗಿ ವಿಶೇಷವಾಗಿ ಕಣ್ಣುಗಳ ಉತ್ತಮ ಆರೋಗ್ಯಕ್ಕಾಗಿ ಈ ಪ್ರವಾಸಿ ತಾಣಕ್ಕೆ ಬರುವುದು ಗುಟ್ಟಾಗಿ ಉಳಿದಿಲ್ಲ.
ಈ ಚಿಕ್ಲಿಹೊಳೆ ಜಲಾಶಯ ಯೋಜನೆಯ ಹಸಿರು ವನಸಿರಿಯ ಆಸುಪಾಸಿನಲ್ಲಿ ವಾಯುವಿಹಾರ ಗೈದರಂತೂ ಅದರಿಂದ ಸಿಗುವ ಆತ್ಮ ತೃಪ್ತಿ ಬಲ್ಲವರಿಗಷ್ಟೇ ಗೊತ್ತು. ಬೆಲ್ಲದ ಸಿಹಿ ಸವಿದಂತಹ ಅನುಭವ. ನಿರ್ಜನ ಪ್ರದೇಶವಾಗಿದ್ದ ಈ ಚಿಕ್ಲಿಹೊಳೆ ಜಲಾಶಯದ ನಿರ್ವಹಣೆಗೆ ಕಳೆದ ಎರಡು ವರ್ಷಗಳಿಂದ ಒಬ್ಬರು ಅರೆಕಾಲಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ವಾರಾಂತ್ಯದ ದಿನಗಳಲ್ಲಿ ಇಲ್ಲಿಗೆ ಬರುವ ಯುವ ಜೋಡಿಗಳು ಅಥವಾ ಇತರೇ ಗುಂಪು ಗುಂಪು ಪ್ರವಾಸಿಗರಿಗೆ ಮೆಲ್ಲಲು ಹಾಗೂ ತಂಪು ಪಾನೀಯಗಳನ್ನು ಒದಗಿಸುವ ಒಂದಷ್ಟು ಟೆಂಟುಗಳಿಗೆ ನೀರಾವರಿ ಇಲಾಖೆ ಅನುವು ಮಾಡಿರುವುದರಿಂದ ದೂರದಿಂದ ಬರುವ ಮಂದಿಗೆ ಕುಡಿಯುವ ನೀರಿನ, ತಿಂಡಿ ತಿನಿಸುಗಳು ಇಲ್ಲಿ ದೊರೆಯುತ್ತವೆ.
ಕಾಡಾನೆಗಳು ಹಾಗೂ ಹುಲಿಯ ದರ್ಶನ ಭಾಗ್ಯ!: ಈ ಪ್ರವಾಸಿ ತಾಣಕ್ಕೆ ಆಗಮಿಸುವ ಪ್ರವಾಸಿಗರಿಗೆ ಇಳಿ ಹೊತ್ತು ಹಾಗೂ ಕೆಲವೊಂದು ಸಂದರ್ಭಗಳಲ್ಲಿ ಇಲ್ಲಿನ ಅರಣ್ಯದೊಳಗೆ ಇರುವ ಕಾಡಾನೆಗಳ ದರ್ಶನವಾದರೂ ಅಚ್ಚರಿಯಿಲ್ಲ. ಆದರೆ ಅಪರೂಪಕ್ಕೆ ಎಂಬಂತೆ ಕಾಡಾನೆ ಹಾಗೂ ಹುಲಿಯನ್ನು ಕಂಡವರೂ ಇದ್ದಾರೆ. ಜಲಾಶಯದ ಮುಂಭಾಗ ಹಾಗೂ ಆಸುಪಾಸಿನಲ್ಲಿ ಕೊಡಗಿನ ಅರಣ್ಯಗಳ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಆದಿವಾಸಿಗಳು ಅಂದರೆ ಅರಣ್ಯವಾಸಿಗಳ ಶಿಬಿರಗಳು ಕಾಣಸಿಗುತ್ತವೆ.
ದೂರದ ಮಹಾನಗರ ಅಥವಾ ಇತರೆ ನಗರಗಳ ಮಂದಿ ಇಲ್ಲಿನ ಆದಿವಾಸಿಗಳ ಜೀವನಕ್ರಮದ ಬಗ್ಗೆ ಅವರ ಬದುಕಿನ ವಾಸ್ತವತೆಗಳನ್ನು ಖುದ್ದು ಅರಿಯಬಹುದಾಗಿದೆ. ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಈ ಚಿಕ್ಲಿಹೊಳೆ ಜಲಾಶಯದ ಸೊಬಗಿನೊಂದಿಗೆ ಅಲ್ಲೇ ಅನತಿ ದೂರದ ದುಬಾರೆ ಸಾಕಾನೆ ಶಿಬಿರ, ಹಾರಂಗಿ ಜಲಾಶಯ, ಕಾವೇರಿ ನಿಸರ್ಗ ಧಾಮ, ಬೈಲಕೊಪ್ಪದ ಟಿಬೆಟಿಯನ್ ಸ್ವರ್ಣಮಂದಿರಗಳು ಪ್ರವಾಸಿಗರಿಗೆ ತೆರೆದುಕೊಳ್ಳುತ್ತವೆ. ಹಾಗೆಯೇ ಈ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರನ್ನು ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲೂ ಅತ್ಯಾಕರ್ಷಕ ವಸತಿ ಗೃಹಗಳು, ಹೋಂ ಸ್ಟೇ, ರೆಸಾರ್ಟ್ ಗಳು ಕೈ ಬೀಸಿ ಕರೆದು ಆತಿಥ್ಯ ನೀಡುತ್ತವೆ. ಒಟ್ಟಾರೆ ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾಗಿ ಕುಶಾಲನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಹೆಸರಾಗಿದೆ.
೨,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ: ಕುಶಾಲನಗರ ತಾಲ್ಲೂಕಿನ ಏಳೆಂಟು ಗ್ರಾಮಗಳ ಸುಮಾರು ೨,೦೦೦ ಹೆಕ್ಟೇರ್ ಭೂಪ್ರದೇಶಕ್ಕೆ ಈ ಜಲಾಶಯದಿಂದ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಮುಖ್ಯ ನಾಲೆಗಳು ಹಾಗೂ ಉಪಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಕೃಷಿಕರು ಭತ್ತ ಬೆಳೆಯುವ ಭೂಮಿಯನ್ನು ತೋಟಗಾರಿಕಾ ಬೆಳೆಗಳಿಗೆ, ವಾಣಿಜ್ಯ ಉದ್ದೇಶಗಳಿಗೆ ಹಾಗೂ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲು ಯೋಚಿಸಿದ್ದರ ಫಲವಾಗಿ ನೀರಾವರಿ ಯೋಜನೆ ತನ್ನ ಮೂಲ ಉದ್ದೇಶದಿಂದ ದೂರವೇ ಉಳಿಯುವಂತಾಗಿದೆ.
ನೀರಾವರಿ ಇಲಾಖೆ ಗಮನಹರಿಸಲಿ: ಕಾವೇರಿ ನೀರಾವರಿ ನಿಗಮದ ಅಧೀನಕ್ಕೆ ಒಳಪಡುವ ಈ ಜಲಾಶಯದ ನಿರ್ವಹಣೆ ಸಮಂಜಸವಾಗಿಲ್ಲ. ಈ ಜಲಾಶಯದ ನಿರ್ವಹಣೆಗೆ ಜಲಸಂಪನ್ಮೂಲ ಇಲಾಖೆಯಿಂದ ಪೂರಕವಾದ ಅನುದಾನ ಬಾರದ ಕಾರಣ ಇದೊಂದು ನಿರರ್ಥಕ ಯೋಜನೆಯಂತಾಗಿದೆ. ಈ ಜಲಾಶಯದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ನಿತ್ಯವೂ ಪ್ರವಾಸಿಗರು ದಾಂಗುಡಿ ಇಡುವ ಈ ಪ್ರವಾಸಿ ತಾಣಕ್ಕೆ ಇಲಾಖೆಯಿಂದ ಪೂರಕವಾದ ಸಿಬ್ಬಂದಿಗಳನ್ನು ನೇಮಿಸಿ ಪ್ರವಾಸಿಗರ ಯೋಗಕ್ಷೇಮ ಹಾಗೂ ಇತರೆ ವಿಚಾರಗಳಿಗೆ ಜೊತೆಯಾದರೆ ಉತ್ತಮ. ಆದರೆ ಇಲ್ಲಿ ಬರುವ ಯಾವುದೇ ಪ್ರವಾಸಿಗರಿಗೂ ಇಲ್ಲಿ ಹೇಳುವವರು ಕೇಳುವವರೇ ಇಲ್ಲದ ಕಾರಣ ಪ್ರವಾಸಿಗರು ಆಡಿದ್ದೇ ಆಟ ಎನ್ನುವಂತಹ ಸ್ಥಿತಿಗೆ ಈ ಪ್ರವಾಸಿ ತಾಣ ಬಂದು ತಲುಪಿರುವುದು ಬೇಸರದ ಸಂಗತಿ.
-ಕೆ.ಎಸ್.ಮೂರ್ತಿ, ಕುಶಾಲನಗರ





