ಬಹುತೇಕ ಚಿತ್ರಗಳಲ್ಲಿ ಒಳ್ಳೆಯವನಾಗಿ ಕಾಣಿಸಿಕೊಂಡಿದ್ದ ವಿಜಯ್ ರಾಘವೇಂದ್ರಗೆ ಬೇರೆ ತರಹದ ಪಾತ್ರಗಳನ್ನು ಮಾಡಬೇಕು ಎಂಬ ಆಸೆ ಇತ್ತಂತೆ. ಅದನ್ನು ನಿರ್ದೇಶಕ ಕಿಶೋರ್ ಮೂಡಬಿದ್ರೆಗೆ ಹೇಳಿಕೊಂಡಿದ್ದಾರೆ. ಅವರು ಒಂದು ಕಥೆ ಹೇಳಿದ್ದಾರೆ. ಆ ಕಥೆ ‘ರಿಪ್ಪನ್ ಸ್ವಾಮಿ’ ಹೆಸರಿನಲ್ಲಿ ಚಿತ್ರವಾಗಿದ್ದು, ಆಗಸ್ಟ್.29ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
‘ರಿಪ್ಪನ್ ಸ್ವಾಮಿ’ ಕುರಿತು ಮಾತನಾಡುವ ವಿಜಯ್ ರಾಘವೇಂದ್ರ, ‘ಈ ಪಾತ್ರವನ್ನು ನಾನೇ ಮಾಡಬೇಕು ಎಂದು ಕಿಶೋರ್ ಸುಮಾರು ಎರಡು ವರ್ಷಗಳ ಕಾಲ ಕಾದಿದ್ದಾರೆ. ನನಗಾಗಿ ಕಾಯಬೇಡಿ, ಬೇರೆಯವರಿಂದ ಮಾಡಿಸಿ ಎಂದಿದ್ದೆ. ‘ಯಾರಿಗೋ ಮಾಡೋದಾಗಿದ್ರೆ ನಾನು ಯಾಕೆ ನಿಮಗಾಗಿ ಎರಡು ವರ್ಷ ಕಾಯಬೇಕಿತ್ತು, ಈ ಕಥೆಗೆ ನೀವೇ ಬೇಕು ಎಂದು ನನ್ನಿಂದ ಈ ಪಾತ್ರ ಮಾಡಿಸಿದ್ದಾರೆ. ‘ಮಾಲ್ಗುಡಿ ಡೇಸ್’ ಚಿತ್ರೀಕರಣ ಸಂದರ್ಭದಲ್ಲಿ ಒಳ್ಳೆಯವನಾಗಿ ಆಗಿ ಸಾಕಾಗಿದೆ. ಸ್ವಲ್ಪ ಬೇರೆ ತರಹದ ಪಾತ್ರ ಮಾಡ್ಬೇಕು ಅಂತ ಅವರಿಗೆ ಹೇಳಿದ್ದೆ. ಯಾವುದೇ ಪಾತ್ರ ಮಾಡಿದ್ರು ಚೆನ್ನಾಗಿ ಮಾಡಿದ್ದೀಯಾ ಅಂತ ಅನ್ನಿಸಿಕೊಳ್ಳಬೇಕು ಎಂಬುದೇ ನನ್ನ ಆಸೆ. ಇದರಲ್ಲೂ ಅದು ಸಾಧ್ಯವಾಗಿದೆ’ ಎಂದರು.
ನಿರ್ದೇಶಕ ಕಿಶೋರ್ ಮೂಡಬಿದ್ರೆ ಮಾತನಾಡಿ, ‘ಮಾಲ್ಗುಡಿ ಡೇಸ್’ ಸಿನಿಮಾದ ಸಮಯದಲ್ಲಿ ಚರ್ಚೆಯಾಗಿತ್ತು. ನನ್ನ ಬಳಿ ಒಂದು ಕಥೆ ಇತ್ತು. ಅದನ್ನು ಬೆಳೆಸಿ ಈ ಚಿತ್ರ ಮಾಡಿದ್ದೇವೆ. ಮೊದಲು ಸಿನಿಮಾ ಮಾತನಾಡಬೇಕು. ಆ ನಂತರ ನಾವು ಮಾತನಾಡಿದರೆ ಚೆಂದ. ನಮ್ಮಲ್ಲಿ ಸಾಕಷ್ಟು ಜನ ನಿರ್ಮಾಪಕರಿದ್ದಾರೆ. ಅವರೆಲ್ಲರ ಸಹಾಯದಿಂದ ಇಂದು ‘ರಿಪ್ಪನ್ ಸ್ವಾಮಿ’ ಆಗಿದೆ ಎಂದರು.
ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತ ಸಂಯೋಜಿಸಿದ್ದಾರೆ.





