ಮಂಗಳೂರು: ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಹೇಶ್ ತಿಮರೋಡಿ ವಿರುದ್ಧ ಉಡುಪಿಯ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಬ್ರಹ್ಮಾವರ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಮಹೇಶ್ ತಿಮರೋಡಿ ವಿಚಾರಣೆಗೆ ಹಾಜರಾಗರಲಿಲ್ಲ.
ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಅವರ ಉಜಿರೆ ನಿವಾಸಕ್ಕೆ ಉಡುಪಿ ಎಎಸ್‌ಪಿ ಸುಧಾಕರ್ ನಾಯಕ್ ನೇತೃತ್ವದ ತಂಡ ಎಂಟ್ರಿ ಕೊಟ್ಟಿದ್ದು, ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದರು.
ಕೆಲಕಾಲ ಮಹೇಶ್ ತಿಮರೋಡಿ ಮನೆ ಹೊರಗೆ ಬಾರದೇ ಸತಾಯಿಸಿದರು. ಬಳಿಕ ಪೊಲೀಸರು ಮಹೇಶ್ ತಿಮರೋಡಿಯನ್ನು ಹೊರಗೆ ಬರುವಂತೆ ಸೂಚಿಸಿದ್ದರು. ಕೆಲಕಾಲ ನಿವಾಸದ ಬಳಿ ಹೈಡ್ರಾಮವೇ ನಡೆದು ಹೋಯಿತು.
ಬಳಿಕ ಮನೆಯಿಂದ ಹೊರಬಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದು ಬ್ರಹ್ಮಾವರ ಠಾಣೆಗೆ ಕರೆದೊಯ್ದರು.
ಈ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಮಹೇಶ್ ತಿಮರೋಡಿ, ನನಗೆ ಏನಾದರೂ ಹೆಚ್ಚು ಕಡಿಮೆ ಆದರೆ ಪೊಲೀಸರೇ ಕಾರಣ. ಎಸ್‌ಐಟಿ ತನಿಖೆ ಮುಚ್ಚಿಸಲು ಈ ಕುತಂತ್ರ ನಡೆಯುತ್ತಿದೆ. ನನ್ನನ್ನು ಕೊಲೆ ಮಾಡಬಹುದು ಎಂದು ಕಿಡಿಕಾರಿದರು.





