Mysore
25
haze

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮೈಸೂರು | ಕುಡಿತಕ್ಕೆ ಹಣ ನೀಡಲಿಲ್ಲವೆಂದು ಪತ್ನಿಯನ್ನೇ ಮಚ್ಚಿನಿಂದ ಕೊಂದ ಪತಿ..

ಮೈಸೂರು : ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ ಹಣ ನೀಡದ ಪತ್ನಿಯನ್ನ ಮಚ್ಚಿನಿಂದ ಹಲ್ಲೆ ಮಾಡಿ ಭೀಕರವಾಗಿ ಕೊಂದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇಶ್ವರ ಬಡಾವಣೆಯಲ್ಲಿ ನಡೆದಿದೆ.‌ ಪತ್ನಿ ಗಾಯಿತ್ರಿ ಅವರನ್ನು ಕೊಲೆ ಮಾಡಿದ ಪತಿ ಪಾಪಣ್ಣ ಪೊಲೀಸರ ಅತಿಥಿಯಾಗಿದ್ದಾನೆ.

ಈ ಹಿಂದೆ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಪಾಪಣ್ಣ ಸಾಲಗಾರನಾಗಿದ್ದ. ಜೊತೆಗೆ ಕುಡಿತದ ಚಟಕ್ಕೆ ದಾಸನಾಗಿದ್ದ. ಕೆಲಸವಿಲ್ಲದೆ ಅಲೆಯುತ್ತಿದ್ದ ಪಾಪಣ್ಣ ಹಣಕ್ಕಾಗಿ ಪತ್ನಿ ಹಾಗೂ ಮಕ್ಕಳನ್ನ ಪೀಡಿಸುತ್ತಿದ್ದ. ಪಾಪಣ್ಣನಿಗೆ ಮೂರು ಮಕ್ಕಳು, ಅದರಲ್ಲಿ ಮಗಳ ಮದುವೆಯನ್ನ ಉಳಿದ ಇಬ್ಬರು ಗಂಡು ಮಕ್ಕಳೇ ಮಾಡಿದ್ದರು. ಮದುವೆಗಾಗಿ ಮಾಡಿದ್ದ ಸಾಲವನ್ನೂ ಗಂಡು ಮಕ್ಕಳೇ ತೀರಿಸುತ್ತಿದ್ದರು. ಹೀಗಿದ್ದರೂ ದುಶ್ಚಟಗಳಿಂದ ಮಾಡಿದ್ದ ಸಾಲ ತೀರಿಸಲು ಆಗಾಗ ಹಣಕ್ಕಾಗಿ ಪತ್ನಿಯನ್ನ ಹಾಗೂ ಮಕ್ಕಳನ್ನ ಪೀಡಿಸುತ್ತಿದ್ದ ಪಾಪಣ್ಣ.

ಸಾಹುಕಾರಹುಂಡಿಯಲ್ಲಿ ಜಮೀನು ಇತ್ತು. ಜಮೀನು ಮಾರಾಟ ಮಾಡಿ ಹಣ ಕೊಡುವಂತೆ ಪಟ್ಟು ಹಿಡಿದಿದ್ದ. ಈ ವಿಚಾರದಲ್ಲಿ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಇದೇ ವಿಚಾರದಲ್ಲಿ ಕ್ಯಾತೆ ತೆಗೆದು ಪಾಪಣ್ಣ ಮನೆಯಲ್ಲಿ ಮಕ್ಕಳು ಇಲ್ಲದಿದ್ದಾಗ ಪತ್ನಿ ಗಾಯಿತ್ರಿಯನ್ನ ಮಚ್ಚಿನಿಂದ ಹಲ್ಲೆ ನಡೆಸಿ ಕೊಂದಿದ್ದಾನೆ. ಕೃತ್ಯವೆಸಗಿದ ಪಾಪಣ್ಣ ಗಾಬರಿಯಿಂದ ಹೊರಗಿನಿಂದ ಬೀಗ ಹಾಕುತ್ತಿದ್ದ ದೃಶ್ಯವನ್ನು ಮಗ ನೋಡಿದ್ದಾನೆ. ಪ್ರಶ್ನಿಸಿದಾಗ ಪಾಪಣ್ಣ ತಬ್ಬಿಬ್ಬಾಗಿದ್ದಾರೆ. ಕೈಗಳು ರಕ್ತಮಯವಾಗಿರುವುದನ್ನ ಗಮನಿಸಿ ಬಾಗಿಲು ತೆರೆದು ನೋಡಿದಾಗ ಗಾಯಿತ್ರಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಹಣಕ್ಕಾಗಿ ಪೀಡಿಸಿದ ತಂದೆ ಪಾಪಣ್ಣ ತಾಯಿ ಗಾಯಿತ್ರಿ ಅವರನ್ನ ಕೊಲೆ ಮಾಡಿದ್ದಾನೆಂದು ಪುತ್ರ ವಿಜಯನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ಪಾಪಣ್ಣ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

Tags:
error: Content is protected !!