Mysore
25
few clouds

Social Media

ಶನಿವಾರ, 24 ಜನವರಿ 2026
Light
Dark

ನ್ಯಾ.ನಾಗಮೋಹನ್‌ ದಾಸ್‌ ವರದಿ ಅವೈಜ್ಞಾನಿಕ : ವೆಂಕಟಗಿರಿಯಯ್ಯ

mandya

ಮಂಡ್ಯ : ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಏಕ ಸದಸ್ಯ ವಿಚಾರಣಾ ಒಳ ಮೀಸಲಾತಿ ಆಯೋಗ ವರದಿ ಅವೈಜ್ಞಾನಿಕವಾಗಿದ್ದು, ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಶಿಫಾರಸ್ಸುಗಳಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಸರ್ಕಾರ ಶೀಘ್ರವಾಗಿ ಒಳ ಮೀಸಲಾತಿ ನೀತಿ ಜಾರಿಗೊಳಿಸಲು ಮುಂದಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು.

ಒಳ ಮೀಸಲಾತಿ ಮಾಡಲು ವೈಜ್ಞಾನಿಕ ಮತ್ತು ನ್ಯಾಯಸಮ್ಮತ ವರದಿ ಪಡೆಯಲು ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮುಂದಿನ ಚುನಾವಣೆ ಬರುವವರೆಗೂ ಕಾಲದೂಡುವ ಹುನ್ನಾರ ನಡೆಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಎಸ್.ಎಂ.ಕೃಷ್ಣರಿಂದ ನ್ಯಾ.ಹನುಮಂತಪ್ಪ ಆಯೋಗ, ಧರ್ಮಸಿಂಗ್‌ರಿಂದ ಎ.ಜೆ.ಸದಾಶಿವ ಆಯೋಗ ಹೀಗೆ ಸರ್ಕಾರಗಳು ೩೦ ವರ್ಷಗಳಿಂದ ಸಮೀಕ್ಷೆಗೆ ಆಯೋಗಗಳನ್ನು ರಚಿಸಿ, ಅವರ ವರದಿಯನ್ನು ತಿರಸ್ಕರಿಸುವುದಕ್ಕೆ ಸೀಮಿತಗೊಂಡಿವೆ. ಅಂತೆಯೇ ಸಿದ್ದರಾಮಯ್ಯ ಸರ್ಕಾರ ಇದೀಗ ಆಯೋಗದ ಹಲವು ನ್ಯೂನ್ಯತೆಗಳಿಂದ ಕೂಡಿದ ವರದಿ ಪಡೆದಿದ್ದು, ಮೀಸಲಾತಿ ಜಾರಿ ಮಾಡಿದರೂ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದರೆ ಮೀಸಲಾತಿ ತಿರಸ್ಕರಿಸುವಂತೆ ವರಿದಿ ಪಡೆಯಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಮೀಕ್ಷೆಯ ವರದಿ ಮೂಲಕ ಅಸ್ಪೃಶ್ಯ ಜಾತಿಗಳನ್ನು ಒಟ್ಟುಗೂಡಿಸಿ ಮೀಸಲು ವರ್ಗೀಕರಣ ಮಾಡುವ ಬದಲಿಗೆ ಜಾತಿಗಳ ವಿಭಜನೀಕರಣ ಮಾಡಿ, ಅಸ್ಪೃಶ್ಯ ಜಾತಿಗಳನ್ನು ಒಡೆದು ಆಳುವ ಕಿರಾತಕ ಮನಸ್ಥಿತಿಯನ್ನು ತೋರುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ವರದಿಯಿಂದಾಗಿ ಮೀಸಲಾತಿ ವರ್ಗೀಕರಣ, ದಲಿತರ ಏಕೀಕರಣವಾಗುವ ನಿಟ್ಟಿನಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು, ಆದಿಕರ್ನಾಟಕ, ಆದಿ ದ್ರಾವಿಡ ಎಂದು ಪ್ರತ್ಯೇಕವಾಗಿ ನಮೂದಾಗಿರುವ ಹೊಲಯ-ಮಾದಿಗ ಸಂಬಂಧಿತ ಜಾತಿಗಳಿಗೆ ಅನುಗುಣವಾಗಿ ಜಾತಿ ಸಮೀಕ್ಷೆ ಮಾಡಬೇಕು. ಛಲವಾದಿ ಜಾತಿಯು ಹೊಲೆಯ ಸಂಬಂಧಿತ ಜಾತಿಯಾಗಿದ್ದು, ಒಟ್ಟಾಗಿ ಸೇರಿಸಿ ಮೀಸಲಾತಿ ಪ್ರಮಾಣ ನಿಗದಿ ಮಾಡಬೇಕು. ನಾಗಮೋಹನ ದಾಸ್ ವರದಿಯ ನ್ಯೂನ್ಯತೆ ಸರಿಪಡಿಸಿ ಪರಿಶಿಷ್ಟ ಜಾರಿ ಮೀಸಲಾತಿ ವರ್ಗೀಕರಣ ಜಾರಿಗೊಳಿಸಬೇಕು. ೧೯೯೦ರ ಭಾರತ ಸರ್ಕಾರ ತಿದ್ದುಪಡಿಯಂತೆ ಬೌದ್ಧ ಧಮ್ಮಕ್ಕೆ ಮರಳಿದ ಅಸ್ಪೃಶ್ಯರನ್ನು ನವ ಬೌದ್ಧರೆಂದು ಪರಿಗಣಿಸಿ, ಮೀಸಲಾತಿಯಲ್ಲಿ ನವಬೌದ್ಧ ಎಂಬುದನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತಾ ಆನಂದ್, ಮದ್ದೂರು ತಾಲ್ಲೂಕು ಅಧ್ಯಕ್ಷ ಮುತ್ತರಾಜು, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶರಾವತಿ ಅಶ್ವಥ್, ನಿಂಗಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Tags:
error: Content is protected !!