Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ಮರಳಿ ಬಾಲ್ಯದ ಕಾಲು ದಾರಿಯಲಿ

family childhood

ನನ್ನ ಅಪ್ಪ ನನ್ನ ಮಗಳಿಗೆ ಆಟ ಆಡಿಸುವಾಗ ಯಾವಾಗಲೂ ಹೇಳುತ್ತಿದ್ದ ಮಾತು, ನಾನು ನೀನು ಇಬ್ಬರು ಒಂದೇ ನನಗೂ ಹಲ್ಲಿಲ್ಲ ನಿನಗೂ ಹಲ್ಲುಗಳಿಲ್ಲ, ನನಗೂ ಕೂದಲಿಲ್ಲ ನಿನಗೂ ಇಲ್ಲ ಅಂತ, ಆದರೆ ಇಂದು ಅವರ ನೆನಪಿನಲ್ಲಿ ಅದು ನಿಜ ಅನಿಸುತ್ತಿದೆ. ಹೌದು ತಿನ್ನಲು ಹಲ್ಲುಗಳಿರುವುದಿಲ್ಲ ಆದರೆ ತಿನ್ನೋ ಆಸೆ , ಅದೇ ರೀತಿ ನಡೆಯಲು ಶಕ್ತಿ ಇರುವುದಿಲ್ಲ ಎಲ್ಲಾ ಕಡೆ ಓಡುವ ಮನಸ್ಸು ನೋಡಿ, ನಮ್ಮ ದೇಹವನ್ನು ಭಗವಂತ ಮರಳಿ ಬಾಲ್ಯದೊಳಗೆ ಕಳುಹಿಸುತ್ತಾನೆ ಎಂದರೆ ತಪ್ಪಾಗುವುದಿಲ್ಲ.

ನೋಡಿ ಆಹಾರ ಪದ್ಧತಿಯಲ್ಲೂ ಸಹ ಮೆತ್ತಗಿನ ಆಹಾರವನ್ನು ನಮ್ಮ ದೇಹ ಒಪ್ಪುತ್ತದೆ ಅಲ್ಲವೇ. ನಾವು ನಮ್ಮ ಬಾಲ್ಯದಲ್ಲಿ ಆಡಿದ ಹಲವಾರು ಆಟಗಳನ್ನು ಮೊಮ್ಮಕ್ಕಳೊಂದಿಗೆ ಆಡಬಹುದು. ಸಾಮಾನ್ಯವಾಗಿ ಎಲ್ಲರಿಗೂ ಅಪ್ಪ-ಅಮ್ಮನಿಗಿಂತ ಅಜ್ಜಿ ತಾತನನ್ನು ಕಂಡರೆ ಒಂದು ಚೂರು ಪ್ರೀತಿ ಹೆಚ್ಚು . ಕಾರಣ ಮಕ್ಕಳ ಜೊತೆ ಆಡಲು ಆಗ ಜವಾಬ್ದಾರಿ ಹಾಗೂ ಸಮಯ ಇರುವುದಿಲ್ಲ.

ಈಗ ನಿವೃತ್ತಿಯ ಸಮಯ ಅದರ ಜೊತೆಗೆ ಮಕ್ಕಳೊಂದಿಗೆ ಆಡದ ಆಟಗಳನ್ನು ಮೊಮ್ಮಕ್ಕಳೊಂದಿಗೆ ಮತ್ತೆ ಆಡಬಹುದು. ಚೌಕಾಬಾರ ಆಟವಾಡುತ್ತಾ ಗಣಿತವನ್ನು ಹೇಳಿಕೊಟ್ಟರೆ, ಅಳುಗುಳಿ ಮನೆ ಆಡುತ್ತಾ ನೆನಪಿನ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ, ಅಷ್ಟೇ ಅಲ್ಲದೆ ಅಂತ್ಯಾಕ್ಷರಿ ಹಾಡುಗಳು , ಮೊಮ್ಮಕ್ಕಳೊಂದಿಗೆ ಕಾರ್ಟೂನ್ ವೀಕ್ಷಣೆ, ಕದ್ದು ಮುಚ್ಚಿ ಮೊಮ್ಮಕ್ಕಳೊಂದಿಗೆ ತಿನ್ನುವ ಐಸ್ ಕ್ರೀಮ್, ನಿಜಕ್ಕೂ ಮರಳಿ ಬಾಲ್ಯಕ್ಕೆ ಹೋಗಬಹುದು. ಎಷ್ಟೋ ಜನ ಅಜ್ಜಿ ತಾತಂದಿರು ಮೊಮ್ಮಕ್ಕಳಿಗೋಸ್ಕರ ಇಂಟರ್‌ನೆಟ್ ಹಾಗೂ ಸ್ಮಾರ್ಟ್ ಫೋನ್ ಗಳನ್ನು ಬಳಸುವುದನ್ನ ಕಲಿತಿದ್ದಾರೆ ಕಾರಣ ಫೋನ್ನಲ್ಲಾದರೂ ಅವರೊಂದಿಗೆ ಮಾತನಾಡಬಹುದು ಎಂದು.

ಸಂಜೆ ವಾಕಿಂಗಿಗೆ ಹೋದಾಗ ತೆಂಗಿನ ಗರಿಯನ್ನು ಕಿತ್ತು ಅದರೊಂದಿಗೆ ಮೊಮ್ಮಕ್ಕಳಿಗೆ ವಾಚ್ ಮಾಡಿ ನಾವು ನಮ್ಮ ಕಾಲದಲ್ಲಿ ಈ ರೀತಿ ಹಾಕಿಕೊಳ್ಳುತ್ತಿದ್ದೆವು ಎಂದಾಗ ಅವರ ಮುಖದಲ್ಲಿ ಮೂಡುವ ನಗು ವಿಶೇಷ. ಅಷ್ಟೇ ಅಲ್ಲ ಅಜ್ಜಿ ಮಡಿಲಲ್ಲಿ ಓಡಿ ಬಂದು ಮಲಗಿದಾಗ ಅಜ್ಜಿಮೊಮ್ಮಕ್ಕಳ ತಲೆಯನ್ನು ಸವರುತ್ತಾ ಕಥೆ ಹೇಳುವುದೇ ಒಂದು ಸಂಭ್ರಮ. ಅದರಲ್ಲೂ ಆ ಕಥೆಗಳು ನಮ್ಮ ಪುರಾಣದ ಕಥೆಗಳಾಗಿದ್ದರೆ ಮೊಮ್ಮಕ್ಕಳಿಗೆಇನ್ನೂ ಆಸಕ್ತಿ ಹೆಚ್ಚು . ಅದರೊಂದಿಗೆ ನಮ್ಮ ಪುರಾಣದ ಕಥೆಗಳನ್ನು ಮುಂದಿನ ಪೀಳಿಗೆಗೆ ಹೇಳಿದಂತಹ ಸಂಭ್ರಮ. ಅಷ್ಟೇ ಅಲ್ಲ ಪಿಜ್ಜಾ, ಬರ್ಗರ್ ಎನ್ನುತ್ತಿದ್ದ ಮಕ್ಕಳಿಗೆ ವಿವಿಧ ಬಗೆಯ ಸಂಜೆಯ ತಿನಿಸುಗಳನ್ನುಮಾಡಿ ಇದನ್ನು ರುಚಿ ನೋಡು ಎಂದಾಗ ನಮ್ಮ ಬಾಲ್ಯವೂ ಸಹ ನೆನಪಾಗುತ್ತದೆ .

ಅದರಲ್ಲೂ ಈಗಿನ ಮಕ್ಕಳಿಗೆ ಮೊಬೈಲನ್ನು ಹೇಗೆ ಬಳಸಬೇಕು ಎಂದು ಕೇಳಿದಾಗ ಅವರು ನಮಗೆ ಗುರುಗಳಾಗಿ ಹೇಳಿಕೊಡುತ್ತಾರೆ . ನಮ್ಮ ಎಲ್ಲಾ ಸಂಪ್ರದಾಯದ ಗುರುಗಳಾಗಿ ನೀವು ನಿಮ್ಮ ಮುಂದಿನ ಪೀಳಿಗೆಗೆ ಎಲ್ಲವನ್ನೂ ಧಾರೆ ಎರೆದು ಕೊಡಿ ಹಾಗೂ ನಿಮ್ಮ ಅನುಭವದ ಆ ಪಾಠ ಎಷ್ಟೇ ಹಣ ಕೊಟ್ಟರೂ ಸಿಗುವುದಿಲ್ಲ ಅದೆಲ್ಲವೂ ನಿಮ್ಮ ಮೊಮ್ಮಕ್ಕಳಿಗೆ ಸಿಗಲಿ ಎಂದು ಆಶಿಸುವೆ.

-ಸೌಮ್ಯ ಕೋಠಿ, ಮೈಸೂರು

Tags:
error: Content is protected !!