ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಮ್ಮಿದ ವಿಚಾರ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.
ಕಾಂಗ್ರೆಸ್ ಶಾಸಕ ಅಪ್ಪಾಜಿ ನಾಡಗೌಡ ಅವರ ಪ್ರಶ್ನೆಗೆ ಉತ್ತರಿಸುವಾಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಮ್ಮಿದರು. ಆಗ ಬಿಜೆಪಿ ಶಾಸಕ ಸುನೀಲ್‍ಕುಮಾರ್, ನಿಮ್ಮ ಆರೈಕೆ ನೋಡಿಕೊಳ್ಳಿ ಎಂದು ಚರ್ಚೆಗೆ ನಾಂದಿ ಹಾಡಿದರು.
ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾನು ಹಾರಿಕೆ ಉತ್ತರ ಕೊಡುವುದಿಲ್ಲ. ಸಮರ್ಪಕ ಉತ್ತರ ಕೊಡುತ್ತೇನೆ ಎಂದರು. ಆಗ ಸ್ಪಷ್ಟನೆ ನೀಡಿದ ಸುನೀಲ್‍ಕುಮಾರ್, ನಾನು ಹಾಗೇ ಹೇಳಿಲ್ಲ. ನಿಮ್ಮ. ಆರೈಕೆ ನೋಡಿಕೊಳ್ಳಿ ಎಂದು ಸ್ಪಷ್ಟಪಡಿಸಿದರು.
ನೀವು ಕೆಮ್ಮಿದರೆ ಯಾರ್ಯಾರಿಗೆ ಏನೇನು ಆಗುತ್ತದೋ ಎಂದು ಛೇಡಿಸಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಯು.ಟಿ.ಖಾದರ್ ಅವರು, ಉಪಮುಖ್ಯಮಂತ್ರಿಗಳ ಆರೋಗ್ಯದ ಬಗ್ಗೆ ಮಾತ್ರ ನಿಮಗೆ ಕಾಳಜಿಯೇ? ಬೇರೆಯವರ ಆರೈಕೆಯ ಬಗ್ಗೆ ಕಾಳಜಿ ಇಲ್ಲವೇ ಎಂದು ಹೇಳಿ, ಉತ್ತರ ಮುಂದುವರಿಸಲು ಸೂಚಿಸಿದರು.





