ಹನೂರು : ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿನ ಕೊಠಡಿಗಳು ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಶಾಲಾ ಕೊಠಡಿಗಳು ದುರಸ್ತಿಯಾಗುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಸಾಮೂಹಿಕವಾಗಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸದಿರುವ ಘಟನೆ ತಾಲ್ಲೂಕಿನ ಪೆದ್ದನಪಾಳ್ಯ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಕೂಡ್ಲೂರು ಕ್ಲಸ್ಟರ್ ವ್ಯಾಪ್ತಿಯ ಪೆದ್ದನ ಪಾಳ್ಯ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ 62 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅವಾಂತರಗಳಿಂದ ಪೋಷಕರು ಬೇಸತ್ತು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದಾರೆ. 4 ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ಕೊಠಡಿಗಳು ಶಿಥಿಲವಾಗಿರುವುದರಿಂದ ಮಳೆಯ ನೀರು ಸೋರುತ್ತಿದ್ದು, ಕಾಂಕ್ರೀಟ್ ಚೂರುಗಳು ಕೆಳಗೆ ಬೀಳುತ್ತಿವೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದರಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಪಾಠ ಕೇಳುವಂತಾಗಿದೆ.
ಪೆದ್ದನಪಾಳ್ಯ ಗ್ರಾಮದ ಮುಖಂಡ ಕುಮಾರ್ ಮಾತನಾಡಿ, ಪೆದ್ದನ ಪಾಳ್ಯ ಸರ್ಕಾರಿ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಸಮಸ್ಯೆಗಳು ಬಗೆಹರಿದಿಲ್ಲ. ಮಳೆ ಬಂದಾಗ ಕೊಠಡಿಗಳು ಸೋರುತ್ತಿದೆ. ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅಕ್ಷರ ದಾಸೋಹದ ಕೊಠಡಿ ಇಲ್ಲದೆ ಇರುವುದರಿಂದ ಶಾಲಾ ಕೊಠಡಿಯಲ್ಲಿಯೇ ಪ್ರತಿನಿತ್ಯ ಬಿಸಿಯೂಟ ತಯಾರು ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ತೊಂದರೆಯಾಗುತ್ತಿದೆ ಎಂದು ದೂರಿದರು.
ಸಂಧಾನ ವಿಫಲ
ವಿಚಾರ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಹಾಗೂ ಇತರೆ ಅಧಿಕಾರಿಗಳು ಗ್ರಾಮದ ಶಾಲೆಗೆ ಭೇಟಿ ನೀಡಿ ಪೋಷಕರ ಜೊತೆ ಚರ್ಚೆ ನಡೆಸಿ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಪೋಷಕರು, ನಿಮ್ಮ ಮಾತಿಗೆ ಬೆಲೆ ಕೊಟ್ಟು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ನಮ್ಮ ಮಕ್ಕಳಿಗೆ ಏನೇ ತೊಂದರೆ ಆದರೂ ನಾವು ಜವಾಬ್ದಾರಿಯಾಗುತ್ತೇವೆ ಎಂದು ಲಿಖಿತವಾಗಿ ಬರೆದು ಕೊಡಿ ಎಂದು ಪಟ್ಟು ಹಿಡಿದರು. ಆದರೆ ಅಧಿಕಾರಿಗಳು ಇದಕ್ಕೆ ಒಪ್ಪದೆ ಹಿಂತಿರುಗಿದರು.
ಶಾಲಾ ಆವರಣದಲ್ಲಿ ಕುಳಿತ ವಿದ್ಯಾರ್ಥಿಗಳು
ಶಾಲಾ ಕೊಠಡಿ ಶಿಥಿಲಗೊಂಡಿರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಇರುವುದರಿಂದ ಗ್ರಾಮದ ದೇವಸ್ಥಾನದ ಆವರಣದಲ್ಲಿ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು, ಈ ಹಿಂದೆ ಮಾಡಿರುವ ಪಾಠ ಪ್ರವಚನಗಳನ್ನು ಓದಿದ್ದಾರೆ.
ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್, ಶಿಕ್ಷಣ ಇಲಾಖೆಯ ಇಸಿಒ ರವೀಂದ್ರ, ಸಿಆರ್‌ಪಿ ಷಣ್ಮುಗ, ಶಾಲೆಯ ಸಹ ಶಿಕ್ಷಕರು, ಗ್ರಾಮಸ್ಥರಾದ ಮುರಳಿ, ಈರಣ್ಣ, ಸತೀಶ್ ಹಾಜರಿದ್ದರು.





