ಮದ್ದೂರು : ರಾಗಿ ಖರೀದಿ ಕೇಂದ್ರಕ್ಕೆ ಸರಬರಾಜು ಮಾಡಿರುವ ರೈತರ ಬಾಕಿ ಹಣ ಪಾವತಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆಯ ಕಾರ್ಯಕರ್ತರು ತಲೆ ಮೇಲೆ ಪಾತ್ರೆ ಹೊತ್ತುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು.
ತಾಲ್ಲೂಕಿನ ಕೊಪ್ಪ ಸಂತೆ ಮೈದಾನದಲ್ಲಿ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು ಮದ್ದೂರು-ಕೊಪ್ಪ ಮಾರ್ಗದ ರಸ್ತೆ ತಡೆ ನಡೆಸಿ ಖರೀದಿ ಕೇಂದ್ರದ ಅಽಕಾರಿಗಳು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ ರೈತರ ಬಾಕಿ ಹಣ ಪಾವತಿಸಬೇಕೆಂದು ಒತ್ತಾಯಿಸಿದರು.
ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಸರಬರಾಜು ಮಾಡಿ ನಾಲ್ಕು ತಿಂಗಳು ಕಳೆದಿದ್ದರೂ ಇದುವರೆಗೂ ಹಣ ಪಾವತಿಸದೆ ಅಧಿಕಾರಿಗಳು ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದು, ತಾಲ್ಲೂಕಿನಾದ್ಯಂತ ಸುಮಾರು ೩೦೦ ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಉಳಿಸಿಕೊಂಡಿದ್ದಾರೆ. ಕೂಡಲೇ ಪಾವತಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.
ಒಂದು ವಾರದೊಳಗಾಗಿ ರೈತರ ಖಾತೆಗೆ ಹಣ ಜಮಾ ಮಾಡದಿದ್ದಲ್ಲಿ ಜನ ಜಾನುವಾರುಗಳೊಟ್ಟಿಗೆ ಮೈಸೂರು-ಬೆಂಗಳೂರು ಹೆದ್ದಾರಿ ತಡೆ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಸೋ.ಶಿ.ಪ್ರಕಾಶ್, ಪ್ರಭುಲಿಂಗ, ಕೀಳಘಟ್ಟ ನಂಜುಂಡಯ್ಯ, ವೆಂಕಟೇಶ್, ಲಿಂಗರಾಜು, ರಾಮೇಗೌಡ, ಮಂಜು, ಚನ್ನಪ್ಪ, ರಮೇಶ್, ಸತ್ಯಾನಂದ, ಜಗದೀಶ್, ಚಿಕ್ಕಲಿಂಗಯ್ಯ, ನಿಂಗೇಗೌಡ, ಅಪ್ಪಾಜಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





