Mysore
15
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮೈಸೂರಿನಿಂದ ಕೇರಳಕ್ಕೆ ಗಾಂಜಾ ಸಾಗಾಟ : ಇಬ್ಬರ ಬಂಧನ

ganja case

ವಿರಾಜಪೇಟೆ : ಮೈಸೂರಿನಿಂದ ಕೇರಳ ರಾಜ್ಯಕ್ಕೆ ಕೊಡಗು ಜಿಲ್ಲೆಯ ಮೂಲಕ ಗಾಂಜಾ ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಸುಮಾರು ಎರಡೂವರೆ ಲಕ್ಷ ಮೌಲ್ಯದ ೭.೮ ಕೆ.ಜಿ. ಗಾಂಜಾದೊಂದಿಗೆ ಬಂಧಿಸುವಲ್ಲಿ ವಿರಾಜಪೇಟೆ ನಗರ ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆಯ ಹುಣುಸೂರಿನ ವಿಜಯನಗರದ ಅಮೀರ್ ಜಾನ್ ಎಂಬವರ ಪುತ್ರ ಗುಜರಿ ವ್ಯಾಪಾರಿ ಅನೀಸ್ ಅಹಮ್ಮದ್(೪೫) ಮತ್ತು ಹುಣಸೂರು ನಗರದ ಸ್ಟೋರ್ ಬೀದಿಯ ಪದ್ಮರಾಜ್ ಎಂಬವರ ಪುತ್ರ ಚಾಲಕ ವೃತ್ತಿಯ ಪಿ.ಚೇತನ್ (೪೦) ಬಂಧಿತ ಆರೋಪಿಗಳು.

ಪ್ರಕರಣದ ಪ್ರಮುಖ ಅರೋಪಿಯಾಗಿರುವ ಅನೀಸ್ ಅಹಮ್ಮದ್ ಸುಮಾರು ೨೦ ವರ್ಷಗಳಿಂದ ಗುಜರಿ ಅಂಗಡಿ ನಡೆಸಿಕೊಂಡು ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹಲವಾರು ವರ್ಷಗಳಿಂದ ಗಾಂಜಾ ಮಾರಾಟ ಮಾಡುತಿದ್ದರೂ ಸ್ಥಳೀಯ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕೃತ್ಯ ಮುಂದುವರಿಸಿದ್ದನು. ಈತನೊಂದಿಗೆ ಮತ್ತೊಬ್ಬ ಆರೋಪಿ ಚೇತನ್ ಕೂಡ ಕೃತ್ಯಕ್ಕೆ ಕೈಜೋಡಿಸಿದ್ದು, ಇಬ್ಬರೂ ಆರೋಪಿಗಳು ಮೈಸೂರಿನಿಂದ ಗಾಂಜಾ ಪಡೆದು ಕೇರಳ ರಾಜ್ಯಕ್ಕೆ ಸಾಗಾಟ ಮಾಡಲು ಯತ್ನಿಸಿದ್ದರು ಎಂದು ಹೇಳಲಾಗಿದೆ.

ಆರೋಪಿಗಳು ಸುಮಾರು ೭ ಕೆಜಿ ೮೭೨ ಗ್ರಾಂ ತೂಕದ ಗಾಂಜಾವನ್ನು ೪ ಪ್ಯಾಕೇಟ್‌ಗಳಾಗಿ ವಿಂಗಡಿಸಿ, ಸ್ನೇಹಿತನ ಬಳಿಯಿಂದ ಬಾಡಿಗೆ ಕಾರನ್ನು ಪಡೆದಿದ್ದರು. ಆ.೯ರಂದು ಚೇತನ್ ಮತ್ತು ಅನೀಸ್ ಬಾಡಿಗೆಗೆ ಪಡೆದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹುಣುಸೂರು-ಗೋಣಿಕೊಪ್ಪ-ಪೆರುಂಬಾಡಿ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಗಾಂಜಾ ಸಾಗಿಸುವ ಪ್ರಯತ್ನ ಮಾಡಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ಗ್ರಾಮದಲ್ಲಿ ಆರೋಪಿಗಳ ಕಾರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ತಪಾಸಣೆ ನಡೆಸಿದರು. ಈ ವೇಳೆ ಸುಮಾರು ೨,೫೦,೦೦೦ ರೂ. ಮೌಲ್ಯದ ೭ ಕೆ.ಜಿ. ೮೭೨ ಗ್ರಾಂ ತೂಕ ಗಾಂಜಾ ಪತ್ತೆಯಾಗಿದೆ.

ಕೂಡಲೇ ಆರೋಪಿಗಳನ್ನು ಗಾಂಜಾ ಸಮೇತ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ೪ ಲಕ್ಷ ಮೌಲ್ಯದ ಕಾರು ಮತ್ತು ಮೊಬೈಲ್ ಫೋನ್ ಹಾಗೂ ಬಿಳಿ ಬಣ್ಣದ ಪ್ಲಾಸ್ಟೀಕ್ ಚೀಲವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.

ವಶಕ್ಕೆ ಪಡೆದಿರುವ ಅರೋಪಿಗಳನ್ನು ವಿರಾಜಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಮತ್ತಷ್ಟು ತನಿಖೆ ಚುರುಕುಗೊಳಿಸಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಅಧಿಕ್ಷಕ ಕೆ.ರಾಮರಾಜನ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ದಿನೇಶ್ ಕುಮಾರ್ ನಿರ್ದೇಶನದ ಮೇರೆಗೆ ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮಹೇಶ್ ಕುಮಾರ್ ಮತ್ತು ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಪ್ರಮೋದ್, ಎ.ಎಸ್.ಐ. ಮಂಜುನಾಥ್ ಟಿ.ಪಿ. ಹಾಗೂ ಸಿಬ್ಬಂದಿಗಳಾದ ಧರ್ಮ, ಗಿರೀಶ್, ಜೋಸ್ ನಿಶಾಂತ್, ಕುಮಾರ, ಹೇಮಂತ್ ಕುಮಾರ್, ಶಿವಕುಮಾರ್, ಶಿವಶರಣಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Tags:
error: Content is protected !!