ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿಗೆ ಆಗಮಿಸಿರುವ ದಸರಾ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು.
ನಿನ್ನೆಯಷ್ಟೇ ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಭತ್ತು ಆನೆಗಳಿಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು.
ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಅಂಡ್ ಕೊ. ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ನಡೆದ ಆನೆಗಳ ತೂಕ ಪರೀಕ್ಷೆಯಲ್ಲಿ ಅಭಿಮನ್ಯು- 5,360 ಕೆ ಜಿ, ಧನಂಜಯ- 5,310 ಕೆ ಜಿ, ಕಾವೇರಿ- 3,010 ಕೆ ಜಿ, ಲಕ್ಷ್ಮಿ- 3,730 ಕೆ ಜಿ, ಭೀಮ- 5,465 ಕೆ ಜಿ, ಏಕಲವ್ಯ- 5,305 ಕೆ ಜಿ, ಮಹೇಂದ್ರ- 5,120 ಕೆ ಜಿ , ಕಂಜನ್- 4,880 ಕೆ ಜಿ ಹಾಗೂ ಪ್ರಶಾಂತ- 5,110 ಕೆ ಜಿ ತೂಕ ಹೊಂದಿದ್ದಾನೆ.
ತೂಕ ಪರೀಕ್ಷೆಯಲ್ಲಿ ಭೀಮ ಆನೆಯು ಕ್ಯಾಪ್ಟನ್ ಅಭಿಮನ್ಯುವನ್ನೇ ಹಿಂದಿಕ್ಕಿ ಅತ್ಯಂತ ಹೆಚ್ಚಿನ ಬಲಶಾಲಿ ಎಂದು ಸಾಬೀತು ಮಾಡಿದ್ದಾನೆ.
ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಿ ತಯಾರಿ ನಡೆಸಲಾಗುತ್ತದೆ. ಈ ಮೂಲಕ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗಾಗಿ ತಾಲೀಮು ನಡೆಸಲು ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತದೆ.
ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ನಿತ್ಯ ತಾಲೀಮು ನಡೆಸಲಾಗುತ್ತದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲು ಮಾವುತರು ಹಾಗೂ ಕಾವಾಡಿಗರು ಸಿದ್ದರಾಗಿದ್ದಾರೆ.



