ಬೆಂಗಳೂರು : ಬಿಬಿಎಂಪಿಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭರ್ಜರಿ ರೋಡ್ ಶೋ ನಡೆಸಲು ಮುಂದಾಗಿದೆ.
ಬಿಜೆಪಿ ಅರ್ಧ ಕಿ.ಮೀ ರೋಡ್ ಶೋ ಕೂಡ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಇನ್ನು ಅಧಿಕೃತವಾಗಿ ರೋಡ್ ಶೋ ಕುರಿತು ಮಾಹಿತಿ ಲಭ್ಯವಾಗಿಲ್ಲವಾದರೂ ಆಗಸ್ಟ್ 10 ರಂದು ಹಳದಿ ಮಾರ್ಗ ಉದ್ಘಾಟನೆಯಾದ ನಂತರ ಮೋದಿ ಅವರು ನಗರದ ಆಯ್ದ ಪ್ರದೇಶದಲ್ಲಿ ರೋಡ್ ಶೋ ನಡೆಸುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ನಾಯಕರು ರೋಡ್ ಶೋ ಬಗ್ಗೆ ಸ್ಥಳಗಳ ಮಾಹಿತಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಂದ ದೃಢಪಟ್ಟ ಬಳಿಕ ಇದು ಅಂತಿಮವಾಗಲಿದೆ.
ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗ ವಾಣಿಜ್ಯ ಸಂಚಾರಕ್ಕೆ ಸಜ್ಜಾಗಿದೆ. ಬೊಮ್ಮಸಂದ್ರದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿಸುವ ಪ್ರಧಾನಿ ಬೊಮ್ಮಸಂದ್ರದಿಂದ ರಾಗಿಗುಡ್ಡ ಮೆಟ್ರೋ ನಿಲ್ದಾಣದವರೆಗೂ ರೈಲಿನಲ್ಲಿ ಪ್ರಯಾಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಯಾಣಿಕರೊಂದಿಗೆ ಅನೌಪಚಾರಿಕವಾಗಿ ಮಾತನಾಡಲಿದ್ದಾರೆ.
ಜಯನಗರದ ರಾಗಿಗುಡ್ಡ ಪ್ರಸನ್ನ ಆಂಜನೇಯ ದೇವಸ್ಥಾನದಿಂದ ಜಯನಗರದ ಶಾಲಿನಿ ಗ್ರೌಂಡ್‌ವರೆಗೆ ಮೋದಿ ರೋಡ್ ಶೋ ನಡೆಸಲು ಬಿಜೆಪಿ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಅವರ ಸ್ವಾಗತ ಹಾಗೂ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಜಯನಗರದ ಶಾಲಿನಿ ಮೈದಾನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವೇದಿಕೆಗೆ ಭೂಮಿ ಪೂಜೆ ನಡೆಸಿದ್ದಾರೆ.
ಮೆಟ್ರೋ ಉದ್ಘಾಟನೆ, ರೈಲಿನಲ್ಲಿ ಪ್ರಯಾಣ ಹಾಗೂ ರೋಡ್ ಶೋ ಬಳಿಕ ಮಧ್ಯಾಹ್ನ 12 ಗಂಟೆಗೆ ಜಯನಗರದ ಶಾಲಿನಿ ಗ್ರೌಂಡ್ಸ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಯುವ ನಿರೀಕ್ಷೆ ಇದೆ. ಐವತ್ತು ಸಾವಿರದಿಂದ ಒಂದೂ ಲಕ್ಷಕ್ಕೂ ಅಽಕ ಮಂದಿ ಸೇರುವ ಸಾಧ್ಯತೆಗಳು ಇವೆ.
ನಮ್ಮ ಮೆಟ್ರೋ ಹಳದಿ ಮಾರ್ಗದ ಮಾಹಿತಿ
ಮಾರ್ಗದ ಉದ್ಧ – 19.15 ಕಿ ಮೀ.
ಮಾರ್ಗದ ವೆಚ್ಚ – ಒಟ್ಟು 5,056,99 ಕೋಟಿ ರೂ.
ಎಲ್ಲಿಂದ ಎಲ್ಲಿಗೆ – ಆರ್.ವಿ.ರಸ್ತೆ – ಬೊಮ್ಮಸಂದ್ರ
ನಿಲ್ದಾಣಗಳ ಸಂಖ್ಯೆ – 16
ಹಸಿರು, ನೀಲಿ ಮಾರ್ಗವನ್ನು ಈ ಹಳದಿ ಮಾರ್ಗ ಸಂಪರ್ಕಿಸುತ್ತದೆ.
ಯೋಜನೆಯ ಫಲಾನುಭವಿಗಳು – ಬೆಂಗಳೂರು ದಕ್ಷಿಣದ ಸುಮಾರು 25 ಲಕ್ಷ ಮಂದಿ
ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಭಾಗಕ್ಕೆ ತೆರಳುವವರಿಗೆ ಭಾರೀ ಅನುಕೂಲ





