ಬೆಂಗಳೂರು: ಧರ್ಮಸ್ಥಳ ಸುತ್ತಮುತ್ತ ಭಾಗದಲ್ಲಿ ಶವಗಳನ್ನು ಹೂತಿಟ್ಟಿರುವ ಆರೋಪದ ತನಿಖೆಗಾಗಿ ರಚಿಸಲಾಗಿರುವ ಎಸ್‍ಐಟಿಯ ಮುಖ್ಯಸ್ಥ ಪ್ರಣಬ್ ಮೊಹಾಂತಿಯವರನ್ನು ಕೇಂದ್ರ ಸೇವೆಗೆ ಕರೆಸಿಕೊಂಡರೆ ಎಸ್‍ಐಟಿಗೆ ಬೇರೆ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾdharತನಾಡಿದ ಅವರು, ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಆಯ್ಕೆಯಾಗುವುದಾದರೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು.
ಕಾನೂನು ಪ್ರಕಾರ, ಯಾವೆಲ್ಲಾ ಅಂಶಗಳಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ನಿಯೋಜನೆಗೊಂಡರೂ ಕೂಡ ಎಸ್‍ಐಟಿ ತನಿಖೆಯನ್ನು ಮುಂದುವರೆಸಬಹುದೇ ಎಂಬುದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದರು.
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮುಂದುವರೆಯುತ್ತಿದೆ. ಈ ಹಂತದಲ್ಲಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ಧರಿಸಿದ್ದೇವೆ. ತನಿಖೆಯ ಬಳಿಕ ಎಲ್ಲಾ ಮಾಹಿತಿಗಳೂ ಸಿಗುತ್ತವೆ ಎಂದು ಸ್ಪಷ್ಟಪಡಿಸಿದರು.





