ಚಿಕ್ಕವಯಸ್ಸಿನ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ಹೀನಕೃತ್ಯಕ್ಕಾಗಿ ಜೈಲು ಶಿಕ್ಷೆಗೊಳಗಾಗಿದ್ದ ಜೆಪ್ರಿ ಎಪ್‌ಸ್ಟೈನ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ತಿರದ ಸ್ನೇಹಿತರಾಗಿದ್ದರು ಎಂಬ ಅಂಶ ಇದೀಗ ಬಯಲಾಗಿ ದೊಡ್ಡ ರಾಜಕೀಯ ಕೋಲಾಹಲವೇ ಎದ್ದಿದೆ.
ಎಪ್‌ಸ್ಟೈನ್ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ನಡೆದ ತನಿಖಾ ವರದಿಯಲ್ಲಿ ಟ್ರಂಪ್ ಅವರ ಹೆಸರಿದೆ ಎಂಬುದು ಬೆಳಕಿಗೆ ಬಂದ ಮೇಲಂತೂ ಈ ವಿಚಾರ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಟ್ರಂಪ್ ಅವರ ಜನಪ್ರಿಯತೆ ಅಷ್ಟೇ ಏಕೆ ಆಡಳಿತ ಪಕ್ಷವಾದ ರಿಪಬ್ಲಿಕನ್‌ನ ಜನಪ್ರಿಯತೆ ಕುಸಿಯುವ ಸೂಚನೆಗಳೂ ಕಾಣಿಸುತ್ತಿವೆ.
ಎಪ್‌ಸ್ಟೈನ್ ಫೈಲ್ಸ್ ಎಂದೇ ಕುಖ್ಯಾತವಾಗಿರುವ ಈ ಪ್ರಕರಣ ಇಂದು ನಿನ್ನೆಯದಲ್ಲ. ಎರಡು ದಶಕಗಳಷ್ಟು ಹಿಂದಿನದು. ಎಪ್‌ಸ್ಟೈನ್ ಒಬ್ಬ ಉದ್ದಿಮೆದಾರ. ಹಣ ಹೂಡಿಕೆದಾರ. ಕೋಟ್ಯಧಿಪತಿ. ಸಹಜವಾಗಿ ಹಣ ವುಳ್ಳವರ ಹತ್ತಿರದ ಪರಿಚಯವಿದ್ದ ವ್ಯಕ್ತಿ. ಎಪ್‌ಸ್ಟೈನ್ ಮೇಲೆ ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯ ತಂದೆ ತಾಯಿ ಪೊಲೀಸರಿಗೆ ದೂರು ನೀಡುತ್ತಾರೆ. ಈ ವ್ಯಕ್ತಿ ತಮ್ಮ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂಬುದು ದೂರು.
ಆ ದೂರು ಆಧರಿಸಿ ತನಿಖೆ ಆರಂಭ ವಾಗುತ್ತದೆ. ತನಿಖೆ ನಡೆಸುತ್ತ ಹೋದಂತೆ ದೊಡ್ಡ ಲೈಂಗಿಕ ಹಗರಣವೇ ಬೆಳಕಿಗೆ ಬರುತ್ತದೆ. ಹಣದ ಆಮಿಷ ಒಡ್ಡಿ ಚಿಕ್ಕವಯಸ್ಸಿನ ಹೆಣ್ಣುಮಕ್ಕಳನ್ನು ತಾನು ಬಳಸಿಕೊಂಡದ್ದಲ್ಲದೆ ದೊಡ್ಡ ದೊಡ್ಡವರ ಲೈಂಗಿಕ ತೃಷೆ ನೀಗಿಸಲು ಈ ಎಪ್‌ಸ್ಟೈನ್ ಪೂರೈಸುತ್ತಿದ್ದ ಬಗ್ಗೆ ಮಾಹಿತಿ ದೊರೆಯುತ್ತದೆ. ದೊಡ್ಡ ದೊಡ್ಡ ಉದ್ಯಮಿಗಳು, ಶ್ರೀಮಂತರು, ಆಡಳಿತ ಮತ್ತು ವಿರೋಧ ಪಕ್ಷಗಳ ರಾಜ ಕಾರಣಿಗಳು ಎಪ್‌ಸ್ಟೈನ್ ನ ಗಿರಾಕಿಗಳಾಗಿರುತ್ತಾರೆ. ತನಿಖಾ ಪೊಲೀಸರು ಸಿದ್ದಮಾಡಿದ ಸಾವಿರಾರು ಪುಟಗಳ ವರದಿಯಲ್ಲಿ ಅಂಥ ಹತ್ತಾರು ಹೆಸರು ಗಳನ್ನು ನಮೂದಿಸಲಾಗುತ್ತದೆ.
ಆ ಪಟ್ಟಿಯಲ್ಲಿ ಟ್ರಂಪ್ ಅವರ ಹೆಸರೂ ಇರುವುದು ಈಗಿನ ರಾಜಕೀಯ ಕೋಲಾಹಲಕ್ಕೆ ಕಾರಣ. ಈ ಕ್ರಿಮಿನಲ್ ಪ್ರಕರಣವನ್ನು ವಿಚಾರಣೆಗಾಗಿ ಗ್ರಾಂಡ್ ಜ್ಯೂರಿಗೆ (ಜನಪ್ರತಿನಿಧಿ ನ್ಯಾಯಾಲಯ) ವಹಿಸಲಾಗುತ್ತದೆ. ಎರಡು ವರ್ಷಗಳ ಕಾಲ ನಡೆದ ವಿಚಾ ರಣೆಯ ನಂತರ ಎಪ್‌ಸ್ಟೈನ್ ವಿರುದ್ಧದ ಆರೋಪಗಳು ಸಾಬೀತಾಗಿದ್ದು ಅವರಿಗೆ ಮತ್ತು ಅವರಿಗೆ ಸಹಕರಿಸಿದ ಮಹಿಳೆ ಗಿಸ್ಟೈನ್ ಮ್ಯಾಕ್ಸ್‌ವೆಲ್‌ಗೆ ೨೦ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆ ವೇಳೆಗೆ ಅವರನ್ನು ಹಲವು ಬಾರಿ ಜೈಲುವಾಸಕ್ಕೆ ಕಳುಹಿಸಲಾಗಿತ್ತು. ಕಾನೂನು ಸಮಸ್ಯೆಗಳಿಂದ ಅವರು ಕೆಲವು ವರ್ಷಕಾಲ ಬಿಡುಗಡೆಯೂ ಆಗಿದ್ದರು. ಆದರೆ ಅಂತಿಮವಾಗಿ ಅವರನ್ನು ಜೈಲುಶಿಕ್ಷೆಗೆ ಒಳಪಡಿಸಲಾಗಿತ್ತು.
ಈ ಬಾರಿ ಜೈಲು ಸೇರಿದ ಕೆಲವೇ ತಿಂಗಳಲ್ಲಿ ಎಪ್‌ಸ್ಟೈನ್ ತಾವಿದ್ದ ಬ್ಯಾರಕ್‌ನಲ್ಲಿಯೇ ಆತ್ಮಹತ್ಯೆ ಮಾಡಿ ಕೊಂಡಿ ದ್ದರು. ಈ ಸಾವು ಆತ್ಮಹತ್ಯೆಯಲ್ಲ ಎಂಬ ಕೂಗು ಆಗ ಎದ್ದಿತ್ತು. ಅವರ ಪ್ರಕರಣ ದಲ್ಲಿ ದೊಡ್ಡದೊಡ್ಡವರ ಹೆಸರು ಥಳಕು ಹಾಕಿಕೊಂಡಿರುವುದರಿಂದ ಏನೋ ಕುಕೃತ್ಯ ನಡೆದಿರಬಹುದು ಎಂಬ ಸಂಶಯ ವ್ಯಕ್ತವಾಗಿತ್ತು. ದೊಡ್ಡವರ ನೀಚ ಕೃತ್ಯಗಳನ್ನು ಮುಚ್ಚಿಹಾಕಲು ಅವರನ್ನು ಮುಗಿಸಲಾಗಿದೆ ಎಂಬ ಆರೋಪವೂ ಬಂದಿತ್ತು.
ಈ ವಿಚಾರ ೨೦೧೬ರ ಅಧ್ಯಕ್ಷ ಚುನಾವಣೆಗಳ ಸಂದರ್ಭದಲ್ಲಿಯೂ ಪ್ರತಿಧ್ವನಿಸಿತ್ತು. ತಾವು ಅಧಿಕಾರಕ್ಕೆ ಬಂದರೆ ಎಪ್‌ಸ್ಟೈನ್ ಪೇಪರ್ಸ್ ಸಂಪೂರ್ಣವಾಗಿ ಬಿಡುಗಡೆ ಮಾಡುವುದಾಗಿ ಟ್ರಂಪ್ ಘೋಷಿಸಿ ದ್ದರು. ( ಆಗ ಆ ವರದಿಯಲ್ಲಿ ತಮ್ಮ ಹೆಸರಿದೆ ಎನ್ನುವುದು ಬಹುಶಃ ಟ್ರಂಪ್‌ಗೆ ತಿಳಿದಿರಲಿಲ್ಲ).
ಎರಡನೇ ಬಾರಿ ಟ್ರಂಪ್ ಅಧಿಕಾರಕ್ಕೆ ಬಂದರು. ಆದರೆ ಎಪ್‌ಸ್ಟೈನ್ ಪೇಪರ್ಸ್ ವಿಚಾರ ಅಷ್ಟು ದೊಡ್ಡದಾಗಿ ಪ್ರಚಾರಕ್ಕೆ ಬರಲಿಲ್ಲ. ತನಿಖಾ ವರದಿ ಬಹಿರಂಗಕ್ಕೆ ಒತ್ತಾಯ ಬರುತ್ತಲೇ ಇತ್ತು. ಈ ಮಧ್ಯೆ ಜನಪ್ರತಿನಿಧಿ ಸಭೆಯ ಉಪಸಮಿತಿಯೊಂದು ವರದಿಯ ಪ್ರತಿಯೊಂದಕ್ಕೆ ಮನವಿ ಸಲ್ಲಿಸಲು ನ್ಯಾಯಾಂಗ ಇಲಾಖೆಗೆ ಸೂಚಿಸಿತು. ಅಂತೆಯೇ ಇಲಾಖೆ ವರದಿ ಪ್ರತಿಗಳಿಗಾಗಿ ಪ್ಲೋರಿಡಾ ಕೋರ್ಟ್‌ಗೆ ಮನವಿ ಸಲ್ಲಿಸಿತು. ಆದರೆ ಗ್ರಾಂಡ್ ಜ್ಯೂರಿ ತನಿಖಾ ವರದಿಯನ್ನು ಬಿಡುಗಡೆಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಮನವಿಯನ್ನು ತಿರಸ್ಕರಿಸಿತು.
ಈ ವಿವಾದ ಅಲ್ಲಿಗೆ ಮುಕ್ತಾಯವಾಗಲಿಲ್ಲ. ಈ ಎಪ್‌ಸ್ಟೈನ್ ಪೇಪರ್ಸ್ ವಿಚಾರ ಸಾರ್ವಜನಿಕ ಚರ್ಚೆಗೆ ಬರುತ್ತಿದ್ದಂತೆಯೇ ಕಳೆದ ಮೇ ತಿಂಗಳಲ್ಲಿಯೇ ಅಟಾರ್ನಿ ಜನರಲ್ ಪಾಮ್ ಬಾಂಡಿ ಅವರು ಟ್ರಂಪ್ ಅವರನ್ನು ಭೇಟಿ ಮಾಡಿ ಆ ವರದಿಯಲ್ಲಿ ಏನಿದೆ ಎನ್ನುವುದನ್ನು ವಿವರಿಸಿದರಂತೆ. ಆ ವರದಿಯಲ್ಲಿ ಟ್ರಂಪ್ ಹೆಸರಿರುವುದನ್ನೂ ಬಹಿರಂಗ ಮಾಡಿದ್ದಾರೆ. ಆ ಬಗ್ಗೆ ಅವರು ಬಹಿರಂಗವಾಗಿಯೇ ಮಾಹಿತಿ ಹಂಚಿಕೊಂಡಿದ್ದಾರೆ. ಆ ಪೇಪರ್ಸ್‌ನಲ್ಲಿ ಟ್ರಂಪ್ ಹೆಸರಿರುವುದು ನಿಜ. ಆದರೆ ಅವರ ಮೇಲೆ ಯಾವುದೇ ಆರೋಪ ಇಲ್ಲ.
ಎಪ್‌ಸ್ಟೈನ್ ಮಾಡಿದ ಅಪರಾಧಗಳಿಗೂ ಟ್ರಂಪ್ ಅವರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಸ್ಪಷ್ಟನೆ ಹೊರಬರುತ್ತಿದ್ದಂತೆಯೇ ಪತ್ರಿಕೆಗಳು ಹೊಸ ಹೊಸ ಮಾಹಿತಿಯನ್ನು ಬಹಿರಂಗಗೊಳಿಸಿವೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯೊಂದು ಟ್ರಂಪ್ ಅವರನ್ನು ಕೆರಳಿಸಿದೆ. ಎಪ್‌ಸ್ಟೈನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಟ್ರಂಪ್ ಕಳುಹಿಸಿದ ಪತ್ರವೊಂದನ್ನು ಪತ್ರಿಕೆ ಪ್ರಕಟಿಸಿದೆ. ಅದರ ಮೇಲೆ ಅಶ್ಲೀಲವಾಗಿರುವಂಥ ಮಹಿಳೆಯರ ಚಿತ್ರಗಳನ್ನು ಬಿಡಿಸಲಾಗಿರು ವುದನ್ನು ಬಹಿರಂಗಮಾಡಿದೆ. ಜೊತೆಗೆ ಎಪ್‌ಸ್ಟೈನ್ ಜೊತೆಗೆ ಟ್ರಂಪ್ ಆತ್ಮೀಯವಾಗಿರುವ ಚಿತ್ರಗಳನ್ನೂ ಪ್ರಕಟಿಸಿದೆ. ತಮ್ಮ ಬಳಿ ಮತ್ತಷ್ಟು ಸಾಕ್ಷ್ಯಗಳು ಇವೆ ಎಂದೂ ತಿಳಿಸಲಾಗಿದೆ.
ಇದೆಲ್ಲಾ ಕಲ್ಪಿತ ವರದಿ. ಶುದ್ಧ ಸುಳ್ಳು ಎಂದಿರುವ ಟ್ರಂಪ್ ಪತ್ರಿಕೆಯ ಮೇಲೆ ಹತ್ತು ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಪ್ರಕಟಿಸಿದ್ದಾರೆ. ಆದರೆ ವಾಲ್ ಸ್ಟ್ರೀಟ್ ಜರ್ನಲ್ ಅಲ್ಲದೆ ಎಲ್ಲ ಪತ್ರಿಕೆಗಳೂ, ಸಿಎನ್‌ಎನ್ ಸೇರಿದಂತೆ ಹಲವು ಟಿವಿ ಚಾನಲ್‌ಗಳು ಟ್ರಂಪ್ ಮತು ಎಪ್‌ಸ್ಟೈನ್ ನಡುವಣ ಸ್ನೇಹ ಎಷ್ಟು ಆತ್ಮೀಯವಾಗಿತ್ತು ಎನ್ನುವುದನ್ನು ಹೇಳುವಂಥ ಮಾಹಿತಿ ಪ್ರಕಟಿಸುತ್ತಿವೆ.
ಎಪ್‌ಸ್ಟೈನ್ ಮತ್ತು ತಾವು ಸ್ನೇಹಿತರಾಗಿದ್ದುದು ನಿಜ. ಆದರೆ ಆ ಸಂಬಂಧ ಕಡಿದುಹೋಗಿತ್ತು. ತಾವಿಬ್ಬರೂ ಸ್ನೇಹಿತರಾಗಿ ಉಳಿದಿರಲಿಲ್ಲ. ಅವರ ಕುಕೃತ್ಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಟ್ರಂಪ್ ಸ್ಪಷ್ಟನೆ ಕೊಟ್ಟಿದ್ದಾರೆ. ಈಗ ಬರುತ್ತಿರುವುದೆಲ್ಲಾ ಕಟ್ಟುಕಥೆ. ಸುಳ್ಳುಗಳ ಸರಮಾಲೆ ಅಷ್ಟೆ ಎಂದೂ ಅವರು ಹೇಳಿದ್ದಾರೆ. ಆದರೆ ಹಗರಣ ಅಂತ್ಯವಾಗುವ ಹಾಗೆ ಕಾಣುತ್ತಿಲ್ಲ. ಎಪ್‌ಸ್ಟೈನ್‌ಗೆ ಸಹಕರಿಸಿದ ಮಹಿಳೆ ಮಾಕ್ಸ್‌ವೆಲ್ ಇನ್ನೂ ಜೈಲಿನಲ್ಲಿದ್ದು ಅವರನ್ನು ಭೇಟಿ ಮಾಡಿ ಮಾಹಿತಿ ಪಡೆಯಲು ಕೆಲವು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಹೊರಟಿದ್ದಾರೆ. ಅವರು ಬಾಯಿಬಿಟ್ಟರೆ ಟ್ರಂಪ್ ಅವರ ನಿಜಬಣ್ಣ ಬಯಲಾಗುತ್ತದೆ ಎನ್ನುವುದು ಟ್ರಂಪ್ ವಿರೋಧಿಗಳ ಲೆಕ್ಕಾಚಾರ.
ಈ ವಿವಾದ ಚರ್ಚೆಯಲ್ಲಿರು ವಂತೆಯೇ ಟ್ರಂಪ್ ಅವರು ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ಬಗ್ಗೆ ದೊಡ್ಡ ಆರೋಪ ಮಾಡಿದ್ದಾರೆ. ೨೦೧೬ ರ ಅಧ್ಯಕ್ಷ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡುತ್ತಿದೆ ಎನ್ನುವ ಆರೋಪ ಇತ್ತು. ರಷ್ಯಾ ಅಧ್ಯಕ್ಷ ಪುಟಿನ್ ಅವರು ಟ್ರಂಪ್ ಪರವಾಗಿ ಚುನಾವಣಾ ಫಲಿತಾಂಶ ಬರುವಂತೆ ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನುವುದು ಆರೋಪ. ಈ ಆರೋಪ ಕುರಿತಂತೆ ಆಗ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ತನಿಖೆಗೆ ಆದೇಶ ನೀಡುತ್ತಾರೆ.
ರಷ್ಯಾ ಹಸ್ತಕ್ಷೇಪ ಮಾಡುತ್ತಿದೆ ಎಂಬ ರಹಸ್ಯ ವರದಿಯೂ ಸಿದ್ಧವಾಗುತ್ತದೆ. ತಮ್ಮ ಗೆಲುವನ್ನು ವಿಫಲಗೊಳಿಸಲು ಒಬಾಮಾ ಹೂಡಿದ ತಂತ್ರ ಇದು. ಇದೊಂದು ರೀತಿಯಲ್ಲಿ ದೇಶ ದ್ರೋಹ ಎಂದು ಟ್ರಂಪ್ ಆರೋಪಿಸಿದ್ದಾರೆ. ಆ ಚುನಾವಣೆಗಳಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದ್ದು ನಿಜ, ಈ ಸತ್ಯ ಬಹಿರಂಗವಾಗಿ ರುವುದರಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದು ಒಬಾಮಾ ಸ್ಪಷ್ಟನೆ ಕೊಟ್ಟಿದ್ದಾರೆ.
ಎಪ್‌ಸ್ಟೈನ್ ಹಗರಣವನ್ನು ಮುಚ್ಚಿಹಾಕಿ ಜನರ ಗಮನವನ್ನು ಬೇರೆ ಕಡೆಗೆ ಹೊರಳಿಸಲು ಟ್ರಂಪ್ ಹೂಡಿರುವ ತಂತ್ರ ಇದು ಎಂದು ಅವರು ಹೇಳಿದ್ದಾರೆ. ಇದೇನೇ ಇದ್ದರೂ ಎಪ್‌ಸ್ಟೈನ್ ಸೆಕ್ಸ್ ಪೇಪರ್ಸ್ ಹಗರಣ ಆಡಳಿತ ರಿಪಬ್ಲಿಕನ್ ಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಮುಂದಿನ ವರ್ಷ ಬರಲಿರುವ ಮಧ್ಯಕಾಲೀನ ಚುನಾವಣೆಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಚಿಂತೆ ರಿಪಬ್ಲಿಕನ್ ಪಕ್ಷವನ್ನು ಕಾಡುತ್ತಿದೆ.
” ಎಪ್‌ಸ್ಟೈನ್ ಫೈಲ್ಸ್ ಎಂದೇ ಕುಖ್ಯಾತವಾಗಿರುವ ಈ ಪ್ರಕರಣ ೨ ದಶಕಗಳಷ್ಟು ಹಿಂದಿನದು. ಎಪ್‌ಸ್ಟೈನ್ಒಬ್ಬ ಉದ್ದಿಮೆದಾರ. ಹಣ ಹೂಡಿಕೆದಾರ. ಕೋಟ್ಯಧಿಪತಿ. ಸಹಜವಾಗಿ ಹಣ ವುಳ್ಳವರ ಹತ್ತಿರದ ಪರಿಚಯವಿದ್ದ ವ್ಯಕ್ತಿ. ಎಪ್‌ಸ್ಟೈನ್ ಮೇಲೆ ಒಬ್ಬ ಅಪ್ರಾಪ್ತ ಬಾಲಕಿಯ ತಂದೆ -ತಾಯಿ ಪೊಲೀಸರಿಗೆ ದೂರು ನೀಡುತ್ತಾರೆ. ಈ ವ್ಯಕ್ತಿ ತಮ್ಮ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂಬುದು ದೂರು.
ಆ ದೂರು ಆಧರಿಸಿ ತನಿಖೆ ಆರಂಭವಾಗುತ್ತದೆ. ತನಿಖೆ ನಡೆಸುತ್ತ ಹೋದಂತೆ ದೊಡ್ಡ ಲೈಂಗಿಕ ಹಗರಣವೇ ಬೆಳಕಿಗೆ ಬರುತ್ತದೆ. ಹಣದ ಆಮಿಷ ಒಡ್ಡಿ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳನ್ನು ತಾನು ಬಳಸಿಕೊಂಡ ದ್ದಲ್ಲದೆ ದೊಡ್ಡ ದೊಡ್ಡವರ ಲೈಂಗಿಕ ತೃಷೆ ನೀಗಿಸಲು ಈ ಎಪ್‌ಸ್ಟೈನ್ ಪೂರೈಸುತ್ತಿದ್ದ ಬಗ್ಗೆ ಮಾಹಿತಿ ದೊರೆಯುತ್ತದೆ”
-ಡಿ.ವಿ.ರಾಜಶೇಖರ





