ಮೈಸೂರು: ರಾಜ್ಯದ ವಿವಿಧ ಕಡೆಗಳಿಗೆ ಇ–ಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ದೆಹಲಿ ಮೂಲದ ನಿಖಿಲ್ ಶರ್ಮಾನನ್ನು ಪೊಲೀಸರು ಭಾನುವಾರ ಬಂಧಿಸಿ, ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೇ.2ರಂದು ನಗರ ಪೊಲೀಸ್ ಕಮಿಷನರ್ ಕಚೇರಿಗೆ ನಗರದ ವಿವಿಧ ಸ್ಥಳಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಇ–ಮೇಲ್ ಸಂದೇಶ ಬಂದಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಗರದ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದರು. ಬಳಿಕ ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ನಜರ್‌ಬಾದ್ ಠಾಣೆಯ ಇನ್‌ಸ್ಪೆಕ್ಟರ್ ಮಹದೇವಸ್ವಾಮಿ, ನಾರಾಯಣ, ಪ್ರವೀಣ್, ಶ್ರೀನಿವಾಸ, ಇಸ್ಮಾಯಿಲ್, ಗೋಪಾಲ್ ಅವರ ತಂಡವು ನಿಖಿಲ್ ಶರ್ಮಾನನ್ನು ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದಿದೆ. ’ಈತ ರಾಯಚೂರು, ಚಾಮರಾಜನಗರ, ಮೈಸೂರು, ಕೇರಳಕ್ಕೆ ಇ–ಮೇಲ್ ಸಂದೇಶ ಕಳಿಸಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





