Mysore
20
few clouds

Social Media

ಶನಿವಾರ, 31 ಜನವರಿ 2026
Light
Dark

ಕ್ರಿಯಾಯೋಜನೆ ಸಿದ್ದಪಡಿಸದ ಅಧಿಕಾರಿಗಳು ; ಸುರೇಶ್‌ ಖಡಕ್ ಎಚ್ಚರಿಕೆ 

  • ಎಂಜಿಎನ್ ವಿವೈ ಕ್ರಿಯಾಯೋಜನೆ ಸಿದ್ಧಪಡಿಸದ ಅಧಿಕಾರಿಗಳ ವಿರುದ್ಧ ಕ್ರಮ
  •  ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ ಎಚ್ಚರಿಕೆ
  •  ನಾಲ್ಕು ಮಹಾನಗರ ಪಾಲಿಕೆಗಳಿಗೆ ಒಂದು ದಿನದ ಗಡುವು ನೀಡಿದ ಸಚಿವರು

ಬೆಂಗಳೂರು : ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಎರಡನೇ ಹಂತದಲ್ಲಿ ಸರ್ಕಾರದಿಂದ ಹಣ ಬಿಡುಗಡೆ ಆಗಿದ್ದರೂ ವೆಚ್ಚ ಮಾಡದ ಮಹಾನಗರ ಪಾಲಿಕೆಗಳ ಮುಖ್ಯಸ್ಥರನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಯೋಜನೆ ಕುರಿತು ಮಂಗಳವಾರ ವಿಧಾನಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು ಹೊರತುಪಡಿಸಿ ಎಲ್ಲಾ ಮಹಾನಗರ ಪಾಲಿಕೆಗಳ ಆಯುಕ್ತರ ಸಭೆಯಲ್ಲಿ ಯೋಜನೆಯ ಪ್ರಗತಿ ಪರಿಶೀಲಿಸಿದ ಸಚಿವರು, ಸರ್ಕಾರ ಸೂಕ್ತ ಅನುದಾನವನ್ನು ಬಿಡುಗಡೆ ಮಾಡಿದ್ದರೂ ಅದಕ್ಕೆ ಪೂರಕವಾಗಿ ಕಾರ್ಯಯೋಜನೆ ಸಿದ್ಧಪಡಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣ, ರಸ್ತೆ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಎರಡನೇ ಹಂತದಲ್ಲಿ ಎಲ್ಲಾ 11 ಮಹಾನಗರ ಪಾಲಿಕೆಗಳಿಗೆ ಒಟ್ಟು 1730 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

ಮೈಸೂರು, ವಿಜಯಪುರ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಮಂಗಳೂರು ಮತ್ತು ರಾಯಚೂರು ಮಹಾ ನಗರಪಾಲಿಕೆಗಳು ತಮಗೆ ನಿಗದಿಪಡಿಸಲಾದ ಅನುದಾನಕ್ಕೆ ಪೂರಕವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸಿವೆ. ಆದರೆ, ಕಲಬುರಗಿ, ತುಮಕೂರು, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳು ಇದುವರೆಗೂ ಕಾರ್ಯಯೋಜನೆ ವರದಿಯನ್ನು ಪೂರ್ಣಗೊಳಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಒಂದು ದಿನದ ಗಡುವು
ಬುಧವಾರ ಸಂಜೆಯೊಳಗೆ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕು. ಈ ಗಡುವಿನೊಳಗೆ ವರದಿಯನ್ನು ಸಿದ್ಧಪಡಿಸದಿದ್ದರೆ ಅಂತಹ ಅಧಿಕಾರಿಗಳು ಮತ್ತು ಎಂಜಿನಿಯರ್ ಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯಾವ್ಯಾವ ಪಾಲಿಕೆಗಳಿಗೆ ಎಷ್ಟೆಷ್ಟು ಅನುದಾನ?
ಮೈಸೂರು ಮಹಾ ನಗರ ಪಾಲಿಕೆಗೆ 250 ಕೋಟಿ ರೂಪಾಯಿಗಳ ಅನುದಾನದ ಪೈಕಿ ಈ ಹಣದಲ್ಲಿ 6 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಜಯಪುರದಲ್ಲಿ 150 ಕೋಟಿ ರೂಪಾಯಿಗಳು, ಬಳ್ಳಾರಿಗೆ 127.5 ಕೋಟಿ ರೂಪಾಯಿ, ದಾವಣಗೆರೆಗೆ 127.5 ಕೋಟಿ ರೂಪಾಯಿ, ತುಮಕೂರಿಗೆ 175 ಕೋಟಿ ರೂಪಾಯಿ, ಶಿವಮೊಗ್ಗಕ್ಕೆ 127.5 ಕೋಟಿ, ಮಂಗಳೂರಿನಲ್ಲಿ 165 ಕೋಟಿ ರೂಪಾಯಿ, ಕಲಬುರಗಿಗೆ 127.5 ಕೋಟಿ ರೂಪಾಯಿ, ಬೆಳಗಾವಿಗೆ 127.5 ಕೋಟಿ ರೂಪಾಯಿ, ಹುಬ್ಬಳ್ಳಿ-ಧಾರವಾಡಕ್ಕೆ 152.50 ಕೋಟಿ ರೂಪಾಯಿಗಳು ಹಾಗೂ ರಾಯಚೂರು ಮಹಾನಗರ ಪಾಲಿಕೆಗೆ 200 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ ಎಂದರು.

Tags:
error: Content is protected !!