Mysore
26
few clouds

Social Media

ಶನಿವಾರ, 24 ಜನವರಿ 2026
Light
Dark

ಕಲ್ಯಾಣ ಕರ್ನಾಟಕ ಭಾಗವನ್ನು ಮೈಸೂರಿನಂತೆ ಅಭಿವೃದ್ಧಿ ಮಾಡಿ : ಖರ್ಗೆ ಆಗ್ರಹ

mallikarjuna kharge

ಯಾದಗಿರಿ : ಕಲ್ಯಾಣ ಕರ್ನಾಟಕ ಭಾಗವನ್ನು ಸಿಂಗಾಪುರ ಮಾಡುವುದು ಬೇಡ. ಮೈಸೂರು, ಬೆಂಗಳೂರಿನ ಮಟ್ಟಕ್ಕಾದರೂ ಅಭಿವೃದ್ಧಿ ಮಾಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ಯಾದಗಿರಿಯಲ್ಲಿ ಆರೋಗ್ಯ ಇಲಖೆಯ 440.63 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳು, ಆರೋಗ್ಯ ಪರಿಷ್ಕರಣೆ ಕಾರ್ಯಕ್ರಮಕ್ಕೆ ಚಾಲನೆ ಮತ್ತು ಜಿಲ್ಲಾ ಬಂಜಾರ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರನ್ನು ಸಿಂಗಾಪುರ ಮಾಡುವುದಾಗಿ ಹೇಳುತ್ತಿದ್ದರು. ನೀವು ಸಿಂಗಾಪುರವಾದರೂ ಮಾಡಿಕೊಳ್ಳಿ. ಬೇರೆ ಏನಾದರೂ ಮಾಡಿ. ಆದರೆ ನಮ್ಮ ಕಲ್ಯಾಣ ಕರ್ನಾಟಕ ಭಾಗವನ್ನು ಸಿದ್ದರಾಮಯ್ಯ ಅವರ ಮೈಸೂರಿನಂತೆ, ಡಿ.ಕೆ.ಶಿವಕುಮಾರ್ ಅವರ ಬೆಂಗಳೂರಿನಂತೆ ಅಭಿವೃದ್ಧಿ ಮಾಡಿ ಎಂದು ಹೇಳಿದರು.

ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಹಣ ಖರ್ಚು ಮಾಡಲೇಬೇಕು. ಈಗ ಕೊಟ್ಟಿರುವ ಹಣವನ್ನು ಆಯಾ ವರ್ಷಕ್ಕೆ ಖರ್ಚು ಮಾಡಿ ಹೆಚ್ಚಿನ ಹಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವರು, ಶಾಸಕರು, ಅ„ಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಕೊಟ್ಟ ಹಣ ಖರ್ಚು ಮಾಡುವುದಿಲ್ಲ ಎಂಬ ಕಪ್ಪು ಚುಕ್ಕೆಗೆ ಗುರಿಯಾಗಬಾರದು. ಹಣ ಖರ್ಚು ಮಾಡಿ ಈ ಭಾಗದ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ತಾವು ಗುರುಮಿಟ್ಕಲ್ ಶಾಸಕಾರಾದಾಗ ಈ ಭಾಗಕ್ಕೆ 3 ಬೀದಿ ದೀಪಗಳಿದ್ದವು. ಕೆರೆ ಕಾಲುವೆ, ರಸ್ತೆಗಳೂ ಇರಲಿಲ್ಲ. ಅವುಗಳನ್ನು ಅಭಿವೃದ್ಧಿಪಡಿಸಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಜನ ಅದನ್ನು ನೆನಪಿಸಿಕೊಂಡಿಲ್ಲ ಎಂದು ವಿಷಾದಿಸಿದರು.

ಕಲ್ಯಾಣ ಕರ್ನಾಟಕ ಭಾಗ ಶಿಕ್ಷಣದಲ್ಲಿ ಸದಾಕಾಲ ಹಿಂದುಳಿಯುತ್ತಿದೆ. ಫಲಿತಾಂಶದಲ್ಲಿ ಕೆಳಗಿನಿಂದ ನಮ್ಮ ಜಿಲ್ಲೆಗಳ ಹೆಸರುಗಳು ನಮೂದಾಗಿರುತ್ತವೆ. ಇಲ್ಲಿ ಗಣಿತ, ವಿಜ್ಞಾನ, ಇಂಗ್ಲೀಷ್ ಭಾಷೆ ಕಲಿಸಲು ಶಿಕ್ಷಕರಿಲ್ಲ. ಕೂಡಲೇ ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ನೇಮಕಾತಿಗೆ ತಡೆ ನೀಡಿರುವುದಾಗಿ ನನ್ನ ಗಮನಕ್ಕೆ ಬಂದಿದೆ. ಯಾವ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತದೆಯೋ ಅಂತಹ ಸಮುದಾಯಗಳಿಗೆ ಖಾಲಿ ಇರುವ ಹುದ್ದೆಗಳಲ್ಲಿ ಶೇ.10, 15, 18 ರಷ್ಟು ಎಷ್ಟು ಸಾಧ್ಯವೋ ಅಷ್ಟನ್ನು ಬ್ಯಾಕ್‍ಲಾಗ್ ಹುದ್ದೆಗಳನ್ನಾಗಿ ಮೀಸಲಿಟ್ಟು ಉಳಿದ ಎಲ್ಲಾ ಹುದ್ದೆಗಳನ್ನೂ ಕೂಡಲೇ ಭರ್ತಿ ಮಾಡಬೇಕು. ಏಕಾಏಕಿ ಎಲ್ಲಾ ನೇಮಕಾತಿಗಳಿಗೂ ತಡೆ ನೀಡುವುದು ಸರಿಯಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಶರಣಬಸಪ್ಪ ದರ್ಶನಾಪೂರ್, ದಿನೇಶ್‍ಗುಂಡೂರಾವ್, ಡಾ.ಶರಣಪ್ರಕಾಶ್ ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ಈಶ್ವರ್‍ಖಂಡ್ರೆ, ಎನ್.ಎಸ್.ಬೋಸರಾಜು, ಡಿ.ಸುಧಾಕರ್, ರಹೀಂಖಾನ್, ಸಂಸದರಾದ ರಾಧಾಕೃಷ್ಣ, ಕುಮಾರ್‍ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!