ಅಹಮದಾಬಾದ್ : ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದೆ. ಸುಮಾರು 242 ಪ್ರಯಾಣಿಕರಿದ್ದ ಈ ವಿಮಾನವು ಪತನವಾಗುವ ಸಂದರ್ಭದಲ್ಲಿ 825 ಅಡಿ ಎತ್ತರದಲ್ಲಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಏರ್ ಇಂಡಿಯಾಗೆ ಸೇರಿದ AI-171 ವಿಮಾನವು ಗುರುವಾರ ಮಧ್ಯಾಹ್ನ 1.40ರ ಸುಮಾರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆಗಿತ್ತು.
ಪತನವಾದ ಸ್ಥಳವಾದ ಮೇಘಾನಿನಗರ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ, ಆಂಬುಲೆನ್ಸ್‌ಗಳು ಧಾವಿಸಿವೆ.
ಈ ವಿಮಾನವು ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಸಹ ಪೈಲೆಟ್ ಕ್ಲೈವ್ ಕುಂದರ್ ಅವರ ನೇತೃತ್ವದಲ್ಲಿತ್ತು ಎಂದು ವಿಮಾನ ಸಂಸ್ಥೆ ಹೇಳಿದೆ.
ಇನ್ನೂ ಘಟನೆ ಕುರಿತು ವಿಮಾನಯಾನ ಸಚಿವ ಆಘಾತ ವ್ಯಕ್ತಪಡಿಸಿದ್ದು, ರಕ್ಷಣೆಗೆ ಕೇಂದ್ರ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಪತನಗೊಂಡ ವಿಮಾನದಲ್ಲಿದ್ದ ಪ್ರಯಾಣಿಕರ ಪಟ್ಟಿಯೂ ಬಿಡುಗಡೆಯಾಗಿದೆ.
ಏರ್ ಇಂಡಿಯಾ ತುರ್ತು ಸಂಖ್ಯೆ ಆರಂಭಿಸಿದ್ದು 1800 5691 444 ನ್ನು ಸಂಪರ್ಕಿಸುವಂತೆ ಕೋರಿದೆ.





