ಬೆಂಗಳೂರು: 10 ವರ್ಷಗಳ ಹಿಂದೆ ಆರಂಭವಾದ ಸಿಎಂ ಸಿದ್ದರಾಮಯ್ಯನವರ ಜಾತಿ ಜನಗಣತಿ ಎಂಬ ಬೃಹನ್ನಾಟಕ ಮೆಗಾ ಸೀರಿಯಲ್ ರೀತಿ ಇನ್ನೂ ಮುಂದುವರೆಯುತ್ತಲೇ ಇದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನಿಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲ ಜಾತಿ ಜನಗಣತಿಯ ಕಾರ್ಡ್ ಬಳಸಿ ಪರಿಶಿಷ್ಟ ಸಮುದಾಯಗಳಿಗೆ, ಹಿಂದುಳಿದ ವರ್ಗಗಳಿಗೆ ಯಾಕೆ ಅಪಮಾನ ಮಾಡುತ್ತೀರಿ ಮುಖ್ಯಮಂತ್ರಿಗಳೇ?
ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಜಾತಿ ಜನಗಣತಿ ವರದಿ ಎಂಬ ಮಂಕು ಬೂದಿ ಎರಚಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡೋ ಕುತಂತ್ರ ಈಗ ಗುಟ್ಟಾಗಿ ಏನು ಉಳಿದಿಲ್ಲ. ಸಾಕು ಮಾಡಿ ನಿಮ್ಮ ನಾಟಕ.
ದಶವಾರ್ಷಿಕ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಗಣತಿಯನ್ನೂ ಸೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಈಗಾಗಲೇ ನಿರ್ಧಾರ ಮಾಡಿದೆ. ಈಗ ಮತ್ತೊಮ್ಮೆ ಕನ್ನಡಿಗರ ಬೆವರಿನ ತೆರಿಗೆ ಹಣವನ್ನು ವಿನಾಕಾರಣ ದುಂದುವೆಚ್ಚ ಮಾಡಿ ಅಪವ್ಯಯ ಮಾಡಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.





