ಬೆಂಗಳೂರು: ರೈತರ ಕೃಷಿ ಪಂಪ್‍ಸೆಟ್‍ಗಳಿ ಸಮರ್ಪಕ ವಿದ್ಯುತ್ ಪೂರೈಸುವ ಕುಸುಮ್-ಸಿ ಯೋಜನೆಯ ಸೋಲಾರ್ ಘಟಕಗಳನ್ನು ಜೂ.11ರಂದು ಅಧಿಕೃತವಾಗಿ ಉದ್ಘಾಟಿಸಲಾಗುತ್ತದೆ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿಬಿದನೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಜೂ.11ರ ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಲಾರ್ ಘಟಕಗಳನ್ನು ಉದ್ಘಾಟಿಸಲಿದ್ದಾರೆ ಎಂದರು.
ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಹನುಮನಹಳ್ಳಿ ಮತ್ತು ಚರಕಮಟ್ಟೇನಹಳ್ಳಿ ಗ್ರಾಮದ ಸುಮಾರು 60 ಎಕರೆ ಪ್ರದೇಶದಲ್ಲಿ 20 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ತಲೆ ಎತ್ತಲಿದೆ. ಕುಸುಮ್-ಸಿ ಯೋಜನೆಯಡಿ ಸ್ಥಾಪಿಸಿರುವ ಅತಿದೊಡ್ಡ ಘಟಕವಿದು. ಹೀಗಾಗಿ ಗೌರಿಬಿದನೂರಿನಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.





