Mysore
18
clear sky

Social Media

ಸೋಮವಾರ, 12 ಜನವರಿ 2026
Light
Dark

ನಿರ್ಗತಿಕ ಮಕ್ಕಳ ಕ್ಷೇಮಾಭಿವೃದ್ಧಿಗೆ “ಸಾತಿ ಸಮಿತಿ” ರಚನೆ: ನ್ಯಾ. ಆನಂದ್

Welfare of Destitute Children

ಮಂಡ್ಯ : ಜಿಲ್ಲೆಯ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅವರ ಕ್ಷೇಮಾಭಿವೃದ್ಧಿಗೆ ಶ್ರಮಿಸಲು “ಸಾತಿ ಸಮಿತಿ”ಯನ್ನು ರಚಿಸಲಾಗಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಹೇಳಿದರು.

ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯ ಸಭಾಂಗಣದಲ್ಲಿ ನಡೆದ ಸಾತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ “ಸಾತಿ ಸಮಿತಿ”ಯನ್ನು ರಚಿಸಲಾಗಿದೆ. ಅಪ್ರಾಪ್ತ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅವರಿಗೆ ಆಧಾರ್ ನೋಂದಣಿ ಮಾಡಿಸಿ, ಕಾನೂನು ನೆರವು ಒದಗಿಸುವುದರ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ನೀಡುವುದು ಸಮಿತಿಯ ಮೂಲ ಉದ್ದೇಶವಾಗಿದೆ ಎಂದರು.

ತಾಲೂಕಿನ ತಹಶೀಲ್ದಾರ್ ಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಮಕ್ಕಳ ರಕ್ಷಣಾಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ವಕೀಲರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.

ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಎನ್.ಜಿ.ಓ ಗಳ ಜೊತೆಗೂಡಿ ಕಾರ್ಯಾಚರಣೆ ನಡೆಸಿ ಜಿಲ್ಲೆಯಲ್ಲಿ ಇರುವ ಅಪ್ರಾಪ್ತ ನಿರ್ಗತಿಕ ಮಕ್ಕಳನ್ನು ಗುರುತಿಸಿ ದತ್ತಾಂಶ ಸಂಗ್ರಹಿಸಬೇಕು. ಅಂತಹ ಮಕ್ಕಳಿಗೆ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಉಚಿತ ವೈದ್ಯಕೀಯ ಸೌಲಭ್ಯ, ಶಿಕ್ಷಣ ಹಾಗೂ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಕಾನೂನಿನಲ್ಲಿ ಅವಕಾಶವಿರುವ ಸೌಲಭ್ಯಗಳನ್ನು ಒದಗಿಸುವುದು “ಸಾತಿ ಸಮಿತಿಯ” ಕಾರ್ಯವಾಗಿದೆ ಎಂದು ತಿಳಿಸಿದರು.

ಇದರ ಕುರಿತಾಗಿ ಇನ್ನೂ ಹೆಚ್ಚಿನ ಪ್ರಚಾರದ ಅಗತ್ಯವಿದೆ, ಸಾರ್ವಜನಿಕರು ನಿರ್ಗತಿಕ ಮಕ್ಕಳು ಕಂಡು ಬಂದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಠಾಣೆ ಅಥವಾ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಗಳಿಗೆ ಮಾಹಿತಿ ನೀಡಿ, ನಿರ್ಗತಿಕ ಮಕ್ಕಳಿಗೆ ಕ್ಷೇಮಾಭಿವೃದ್ಧಿಗೆ ಶ್ರಮಿಸಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ತಹಶೀಲ್ದಾರ್ ಗಳಾದ ಆದರ್ಶ್, ಸ್ಮಿತಾ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಸವಿತಾ, ಜಿಲ್ಲಾ ಮಕ್ಕಳ‌ ರಕ್ಷಣಾಧಿಕಾರಿ ಸ್ಮಿತಾ, ಮಕ್ಕಳ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಮಿತ್ರ, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!