Mysore
18
clear sky

Social Media

ಸೋಮವಾರ, 12 ಜನವರಿ 2026
Light
Dark

ಗೋವು, ಒಂಟೆ ವಧೆ ತಡೆಗೆ ಅಗತ್ಯ ಕ್ರಮವಹಿಸಿ : ಜಿಲ್ಲಾಧಿಕಾರಿ ಕುಮಾರ ಸೂಚನೆ

slaughter

ಮಂಡ್ಯ : ಜೂನ್‌ 7ರಂದು ಬಕ್ರಿದ್ ಹಬ್ಬದ ಸಮಯದಲ್ಲಿ ಗೋವು ಹಾಗೂ ಒಂಟೆಗಳ ವಧೆ ಮತ್ತು ಸಾಗಣೆ ತಡೆಯಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪ್ರಾಣಿ ದಯಾ ಸಂಘ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೋವು ಹಾಗೂ ಒಂಟೆ ವಧೆ ಕಾನೂನು ಬಾಹಿರ ಚಟುವಟಿಕೆ ಆಗಿದೆ. ಜಿಲ್ಲೆಯ ರಾಮನಗರ ಮದ್ದೂರು ಗಡಿ ಭಾಗ ಹಾಗೂ ನಾಗಮಂಗಲ-ಕೆ.ಆರ್ ಪೇಟೆ ಗಡಿಭಾಗದಲ್ಲಿ ಅಕ್ರಮ ಪ್ರಾಣಿ ಸಾಗಾಣಿಕೆ ನಡೆಯಬಹುದಾಗಿದ್ದು, ಈ ಕುರಿತು ನಿಗಾ ವಹಿಸಿ ಪೊಲೀಸ್ ಚೆಕ್ ಪೋಸ್ಟ್ ಗಳಲ್ಲಿ ಅಗತ್ಯ ಸಿಬಂದಿಗಳನ್ನು ನಿಯೋಜಿಸಿ ತಪಾಸಣೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ಒಂಟೆ, ಹಸು ಬಲಿ ಕೊಡದಿರುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಕ್ರಿದ್ ಹಬ್ಬದ ದಿನದಂದು ಪಶುಪಾಲನ ಇಲಾಖೆ ಅರಣ್ಯ ಇಲಾಖೆ ಸಾರಿಗೆ ಇಲಾಖೆ ನಗರಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ಪ್ರಾಣಿ ಬಲಿ ತಡೆಗಟ್ಟುವ ಸಂಬಂಧ ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು.

ಮದ್ದೂರು ತಾಲೂಕಿನ ಭೂತಗೆರೆಯಲ್ಲಿ ಸರ್ಕಾರಿ ಘೋಷಾಲೆಯು ಪ್ರಾರಂಭಗೊಂಡಿದ್ದು ಅಕ್ರಮ ಸಾಗಾಣಿಕೆ ಗೋವುಗಳನ್ನು ಸದರಿ ಘೋಶಾಲೆಗೆ ಬಿಡಬಹುದಾಗಿದೆ, ಜಾನುವಾರುಗಳ ಸಾಗಾಣಿಕೆ ಮಾಡಲು ಇಲಾಖೆಯಿಂದ ಸಾಗಾಣಿಕೆ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಸದರಿ ಪ್ರಮಾಣ ಪತ್ರವನ್ನು ಸಾಗಾಣಿಕೆ ಸಂದರ್ಭದಲ್ಲಿ ಸಾಗಾಣಿಕೆದಾರರು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದರು.

ಸಾತನೂರಿನ ಆದಿಚುಂಚನಗಿರಿ ಗೋಶಾಲೆ, ಆದಿಚುಂಚನಗಿರಿ ಕ್ಷೇತ್ರದ ಆದಿಚುಂಚನಗಿರಿ ಗೋಶಾಲೆ, ದೊಡ್ಡ ಬ್ಯಾಡರಹಳ್ಳಿಯ ಧ್ಯಾನ್ ಫೌಂಡೇಶನ್ ಕೊರಕ್ಷಾ ಟ್ರಸ್ಟ್, (ಚೈತ್ರ ಗೋಶಾಲೆ), ಕೆರೆತೊಣ್ಣುರಿನ ಯತಿರಾಜ ಸೇವಾ ಟ್ರಸ್ಟ್, ಅರಕನಹಳ್ಳಿಯ ಕೃಷ್ಣ ಗಿರಿ ಗೋಶಾಲೆ ಟ್ರಸ್ಟ್, ಹೊಸಗಾವಿಯ ಗಣೇಶ ದೇಶಿ ಗೋಶಾಲೆ ಟ್ರಸ್ಟ್ ಗಳ 2025-26 ನೇ ಸಾಲಿನಲ್ಲಿ ಸರ್ಕಾರದಿಂದ ಸಹಾಯಧನ ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಶುವೈದ್ಯಾಧಿಕಾರಿ ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು

Tags:
error: Content is protected !!