ಕಳೆದ ವರ್ಷ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಘಾಟಿ’ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗುವುದರ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆಯಾಗಿತ್ತು. ಅದರ ಪ್ರಕಾರ, ಈ ವರ್ಷ ಏಪ್ರಿಲ್.18ರಂದು ಚಿತ್ರ ಬಿಡುಗಡೆ ಆಗಬೇಕಿತ್ತು.
ಏಪ್ರಿಲ್ ಮುಗಿದು ಜೂನ್ ಬಂದರೂ,ಚಿತ್ರ ಮಾತ್ರ ಬಿಡುಗಡೆ ಆಗಿರಲಿಲ್ಲ. ಈ ಚಿತ್ರದ ಬಿಡುಗಡೆ ಯಾವಾಗ ಎಂದು ಅನುಷ್ಕಾ ಶೆಟ್ಟಿ ಅಭಿಮಾನಿಗಳು ತಲೆಕೆಡಿಸಿಕೊಂಡು ಕುಳಿತಿರುವಾಗಲೇ, ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರವು ಜುಲೈ.11ರಂದು ಬಿಡುಗಡೆಯಾಗುತ್ತಿದೆ.
‘ಘಾಟಿ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಈ ಚಿತ್ರಕ್ಕೆ ಅನುಷ್ಕಾ ಶೆಟ್ಟಿ, ಕ್ರಿಷ್ ಜಾಗರ್ಲಮುಡಿ ಅವರೊಂದಿಗೆ ಕೈಜೋಡಿಸಿದ್ದಾರೆ. UV ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಾಗರ್ಲಮುಡಿ ನಿರ್ಮಿಸಿದ್ದಾರೆ. ‘ವೇದಂ’ ಯಶಸ್ಸಿನ ನಂತರ ಇದು ಅನುಷ್ಕಾ ಮತ್ತು ಕ್ರಿಷ್ ಅವರ ಎರಡನೇ ಚಿತ್ರವಾಗಿದೆ. UV ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಇದು ಅನುಷ್ಕಾ ಅವರ ನಾಲ್ಕನೇ ಸಿನಿಮಾ ಎನ್ನುವುದು ವಿಶೇಷ.
‘ಘಾಟಿ’ ಚಿತ್ರಕ್ಕೆ ‘ವಿಕ್ಟಿಮ್, ಕ್ರಿಮಿನಲ್, ಲೆಜೆಂಡ್’ ಎಂಬ ಅಡಿಬರಹ ಇರುವ ಈ ಚಿತ್ರದಲ್ಲಿ ಮಾನವೀಯತೆ, ಜೀವನ ಹೋರಾಟ ಮತ್ತು ಮುಕ್ತಿಯ ಕುರಿತ ಕಥಾಹಂದರ ಹೊಂದಿದೆ. ಚಿತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ವಿಷಯವನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಇದೊಂದು ಸಸ್ಪೆನ್ಸ್ ಮತ್ತು ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಎಂದು ಹೇಳಲಾಗುತ್ತಿದೆ.
‘ಘಾಟಿ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಜೊತೆಗೆ ವಿಕ್ರಮ್ ಪ್ರಭು, ರಮ್ಯಾ ಕೃಷ್ಣ, ಜಗಪತಿ ಬಾಬು, ಜಾನ್ ವಿಜಯ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಮನೋಜ್ ರೆಡ್ಡಿ ಕಟ್ಟಾಸನಿ ಛಾಯಾಗ್ರಹಣ, ನಾಗವಲ್ಲಿಸ ವಿದ್ಯಾ ಸಾಗರ್ ಸಂಗೀತವಿದೆ.





