ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರ್‌ಸಿಬಿ ಜೋಶ್ ಮುಗಿಲು ಮುಟ್ಟಿದ್ದು, ಅಭಿಮಾನಿಗಳು ಆರ್‌ಸಿಬಿ ಟೀಂಗಾಗಿ ವಿಶೇಷ ಕಾರೊಂದನ್ನು ಸಿದ್ಧಪಡಿಸಿದ್ದಾರೆ.
ದೀಪಕ್, ಶ್ರೇಯಸ್ ಹಾಗೂ ಪ್ರಣೀತ್ ಎಂಬ ಆರ್‌ಸಿಬಿ ಅಭಿಮಾನಿಗಳು ವಿಶೇಷ ಕಾರೊಂದನ್ನು ಸಿದ್ಧಪಡಿಸಿದ್ದು, ಕಾರನ್ನು ಸಂಪೂರ್ಣವಾಗಿ ಆರ್‌ಸಿಬಿಮಯ ಮಾಡಿದ್ದಾರೆ.
ಹೆಬ್ಬಾಳು ಕೈಗಾರಿಕಾ ಪ್ರದೇಶದ ಕಾರ್‌ಮೆಡ್‌ನಲ್ಲಿ ಈ ವಿಶೇಷ ಕಾರು ಸಿದ್ಧವಾಗಿದ್ದು, ಕಾರಿನ ಮುಂಭಾಗದಲ್ಲಿ ಕನ್ನಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಬರೆಸಲಾಗಿದೆ.
ಕಾರಿನ ಒಂದು ಬದಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಇತರ ಆಟಗಾರರು ಹಾಗೂ ಅಭಿಮಾನಿಗಳ ಸ್ಟಿಕ್ಕರ್ ಅಂಟಿಲಾಗಿದ್ದು, ಮತ್ತೊಂದು ಬದಿಯಲ್ಲಿ ಐಪಿಎಲ್ ಗೆದ್ದ ಮಹಿಳಾ ತಂಡದ ಸ್ಟಿಕ್ಕರ್ ಅಂಟಿಸಲಾಗಿದೆ.
ಆರ್‌ಸಿಬಿ ಪರ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು, ಮೈಸೂರು ಹಾಗೂ ಬೆಂಗಳೂರಿನಲ್ಲಿ ಸಂಚಾರ ಮಾಡಿ ಅಭಿಮಾನಿಗಳಲ್ಲಿ ಜೋಶ್ ತುಂಬಲಿದ್ದಾರೆ.





