ಮೈಸೂರು: ಮೈಸೂರು ನಗರದಲ್ಲಿ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್ ಪ್ರತಿಕ್ರಿಯೆ ನೀಡಿದ್ದು, ಕೆಲವೆಡೆ ಶಾಶ್ವತ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾವು ಸಹಜವಾಗಿ ಮೇ ತಿಂಗಳಿನಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುತ್ತೇವೆ. ಮಳೆಗಾಲದ ಸಮಸ್ಯೆಗಳನ್ನು ಅರಿತು ಮುಂಚಿತವಾಗಿಯೇ ಕಾಮಗಾರಿಗಳನ್ನು ಮಾಡುತ್ತೇವೆ. ಈ ಬಾರಿ ಮುಂಚಿತವಾಗಿಯೇ ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುವ ಕೆಲವೆಡೆಗಳಲ್ಲಿ ಸಮಸ್ಯೆಗಳು ಎದುರಾಗಿದೆ. ಮಳೆಗಾಲದಲ್ಲಿ ನೀರಿನ ರಭಸಕ್ಕೆ ಕೆಲವೆಡೆ ಯುಜಿಡಿ ತೆರೆದುಕೊಳ್ಳುತ್ತಿವೆ. ಆಯಾ ಸ್ಥಳಗಳ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯಕ್ಕೆ ತಕ್ಕಂತೆ ಪೈಪ್‌ಗಳನ್ನು ಅಳವಡಿಸಿರುತ್ತೇವೆ. ಆ ಭಾಗದಲ್ಲಿ ಜನಸಂಖ್ಯೆ ಹೆಚ್ಚಾಗಿ, ಬಳಕೆ ಹೆಚ್ಚಾದಾಗ ಈ ರೀತಿಯ ಸಮಸ್ಯೆಗಳು ಎದುರಾಗುತ್ತದೆ.
ಸದ್ಯ ಸಮಸ್ಯೆ ಎದುರಾದ ಸ್ಥಳಗಳಲ್ಲಿ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಯುಜಿಡಿ ಸಮಸ್ಯೆಗಳನ್ನೂ ಸರಿಪಡಿಸುತ್ತಿದ್ದೇವೆ. ಕೆಲವು ಕಡೆಗಳಲ್ಲಿ ಶಾಶ್ವತ ಕಾಮಗಾರಿಯನ್ನು ಮಾಡುತ್ತಿದ್ದೇವೆ. ಸಮಸ್ಯೆಗಳು ಹೆಚ್ಚಾದಾಗ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಣೆಗೆ ವಿಶೇಷ ತಂಡ ರಚನೆ ಮಾಡಿದ್ದೇವೆ. ರಾಜಕಾಲುವೆಗಳಲ್ಲಿ ಹೂಳು ತೆಗೆಯುವ ಕಾರ್ಯ ಕಳೆದ ಮೂರು ತಿಂಗಳಿನಿಂದಲೇ ನಡೆಯುತ್ತಿದೆ. ಸದ್ಯ ಮಳೆಯಿಂದ ನಗರದಲ್ಲಿ ಇಲ್ಲಿಯವರೆಗೂ ಯಾವುದೇ ಹಾನಿ ಕಂಡು ಬಂದಿಲ್ಲ ಎಂದು ಮಾಹಿತಿ ನೀಡಿದರು.





