Mysore
15
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ದೇಶಕ್ಕೆ ಆಹಾರ ಕೊಡುವ ಕೃಷಿ, ತೋಟಗಾರಿಕೆ ಕ್ಷೇತ್ರ ಉಳಿಯಬೇಕಿದೆ : ಶಾಸಕ ಜಿಟಿಡಿ

mla gt devegowda

ತೋಟಗಾರಿಕೆ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಮಹಾವಿದ್ಯಾಲಯ ವಾರ್ಷಿಕೋತ್ಸವ ಉದ್ಘಾಟನೆ

ಮೈಸೂರು: ದೇಶದ ಜನರಿಗೆ ಅನ್ನ ಕೊಡುವ ಕೃಷಿ, ತೋಟಗಾರಿಕೆ ಕ್ಷೇತ್ರ ಉಳಿಯಬೇಕು. ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರ ಉಳಿಯುವುದರಿಂದ ಪದವೀಧರರು ಕೃಷಿ ಕ್ಷೇತ್ರದ ಕಡೆಗೆ ಮುಖ ಮಾಡುವಂತಹ ದಿನಗಳು ಬರಲಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರು ತಾಲ್ಲೂಕಿನ ಯಚಲಹಳ್ಳಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ತೋಟಗಾರಿಕೆ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿ ವಸತಿ ನಿಲಯಗಳ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ಕಾಲದಲ್ಲಿ ಸಾವಿರ ತೆಂಗಿನ ಮರ ಇದ್ದರೂ ಆದಾಯ ಇಲ್ಲದಂತಾಗಿತ್ತು. ಐದು ಎಕರೆಯಲ್ಲಿ ಬಾಳೆ ಬೆಳೆದವನು ಶ್ರೀಮಂತ ಎನ್ನುತ್ತಿದ್ದರು. ಆದರೆ, ಈಗ ಬೆಲೆ ಸಿಗದೆ ಬಾಳೆ ಬೆಳೆಗಾರರು ಕಂಗಲಾಗಿದ್ದಾರೆ. ಆರು ತಿಂಗಳಿನಿಂದ ತೆಂಗಿನಕಾಯಿ, ಎಳೆನೀರು, ಕೊಬ್ಬರಿ ಬೆಲೆ ಜಾಸ್ತಿಯಾಗಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಕೃಷಿಕರ ಸ್ಥಿತಿ ಶೋಚನೀಯವಾಗಿದೆ. ಕೃಷಿ ಜಮೀನು ಕಡಿಮೆಯಾಗುತ್ತಿದೆ. ಆಹಾರ, ತೋಟಗಾರಿಕೆ ಬೆಳೆಗಳು ಇಲ್ಲದೆ ಮನುಷ್ಯ ಉಳಿಯಲು ಸಾಧ್ಯವಿಲ್ಲ. ಹಾಗಾಗಿ, ಕೃಷಿ ಚಟುವಟಿಕೆ ಮಾಡುವ ರೈತರ ಹಿತ ಕಾಪಾಡಬೇಕು ಎಂದರು.

ಕೃಷಿ ವಿಷಯದಲ್ಲಿ ಬಿಎಸ್‌ಸಿ ಅಗ್ರಿಕಲ್ಚರ್, ಎಂಎಸ್‌ಸಿ ಆರ್ಟಿಕಲ್ಚರ್ ಮಾಡಿದವರಿಗೆ ಮುಂದೆ ಅನುಕೂಲವಾಗಲಿದೆ. ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಮುಂದೊಂದು ದಿನ ಕೃಷಿಕ, ರೈತನೇ ಉಳಿಯುವುದು. ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಕೃಷಿ ಇಲಾಖೆಯಲ್ಲಿ ದಿನಗೂಲಿ ಆಧಾರದ ಮೇಲೆ ನೇಮಕಕ್ಕೆ ಚಿಂತನೆ ಮಾಡಲಾಗಿದೆ. ಅದರ ಬದಲಿಗೆ ನೇರ ನೇಮಕಾತಿ ಮಾಡಿಕೊಂಡು ಕೃಷಿ,ತೋಟಗಾರಿಕೆ ಕ್ಷೇತ್ರ ಉಳಿಸಬೇಕು ಎಂದು ಒತ್ತಾಯಿಸಿದರು.

ಕೃಷಿ,ತೋಟಗಾರಿಕೆ ಪದವಿ ಮಾಡುವವರೆಲ್ಲರೂ ರೈತಾಪಿ ಕುಟುಂಬದಿಂದ ಬಂದಿದವರು. ತಂದೆ-ತಾಯಿಗಳನ್ನು ಮರೆಯಬೇಡಿ. ಅವರನ್ನು ಸಂತೋಷದಿಂದ ನೋಡಿಕೊಳ್ಳಬೇಕು. ಅವರ ಮನಸ್ಸಿಗೆ ನೋವುಂಟು ಮಾಡಬಾರದು. ಹುಟ್ಟು ಆಕಸ್ಮಿಕ-ಸಾವು ನಿಶ್ಚಿತ. ಇರುವಾಗ ಜನರ ಸೇವೆ ಮಾಡಬೇಕು. ಪ್ರತಿಯೊಬ್ಬರೂ ದ್ವೇಷಿಸುವ ಬದಲಿಗೆ ಪರಸ್ಪರ ಪ್ರೀತಿಸಿದರೆ ಆರೋಗ್ಯದಿಂದ ಇರಬೇಕು ಎಂದು ಕಿವಿಮಾತು ಹೇಳಿದರು.

ಉಮೇಶ್ ಕತ್ತಿ ಅವರು ತೋಟಗಾರಿಕೆ ಸಚಿವರಾಗಿದ್ದಾಗ ತೋಟಗಾರಿಕೆ ಮಹಾವಿದ್ಯಾಲಯವನ್ನು ಬೇರೆ ಕಡೆ ಆರಂಭಿಸುವಂತೆ ಕೆಲವರು ಪ್ರಯತ್ನ ಮಾಡಿದ್ದರು. ಆದರೆ ನಾನು ಮೈಸೂರು ತಾಲ್ಲೂಕಿಗೆ ತರಲು ಹೋರಾಟ ಮಾಡಿ ಪ್ರಯತ್ನ ಮಾಡಿದ್ದರಿಂದಾಗಿ ಇಲ್ಲಿಯೇ ಸ್ಥಾಪನೆಯಾಯಿತು. ವಿವಿಗೆ ರಸ್ತೆ ಮಾಡುವಂತೆ ಬೇಡಿಕೆ ಇಟ್ಟಿದ್ದರಿಂದ ಅನುದಾನ ಬಿಡುಗಡೆ ಮಾಡಿಸಿ ರಸ್ತೆ ಡಾಂಬರೀಕರಣ ಮಾಡಿಸಿದ್ದೇನೆ. ಈಗ ಕಾಂಪೌಂಡ್,ಆಡಿಟೋರಿಯಂ ಆಗುವಂತೆ ಹೇಳಿದ್ದರೂ ಈತನಕ ಯಾರೂ ಕೂಡ ನನ್ನ ಬಳಿಗೆ ಬಂದು ಮನವಿ ಕೊಟ್ಟಿಲ್ಲ. ಹಾಗಾಗಿ,ಸಚಿವರನ್ನು ಭೇಟಿ ಮಾಡಿ ಬೇಕಾದ ಅನುಕೂಲ ಮಾಡಿಕೊಡಲು ಗಮನಹರಿಸುವೆ ಎಂದು ಭರವಸೆ ನೀಡಿದರು.

ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ನನ್ನನ್ನು ಕರೆದಿದ್ದರೆ ಬರುತ್ತಿದ್ದೆ. ವಿವಿಯ ಹಲವಾರು ಸಮಸ್ಯೆ, ಬೇಡಿಕೆಗಳನ್ನು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಚರ್ಚಿಸುವೆ. ವಿವಿಯ ಉನ್ನತಿಗೆ ಬೇಕಾದ ಕಾರ್ಯಕ್ರಮ ರೂಪಿಸಲು ಯತ್ನಿಸುವೆ ಎಂದರು.

ನಾನೊಬ್ಬ ಕೃಷಿಕ: ನಾನು ಹುಟ್ಟುತ್ತಲೇ ಕೃಷಿಕ. ಪ್ರಗತಿಪರ ರೈತ. ಯಾರು ಕೂಡ ನನ್ನ ರೀತಿಯಲ್ಲಿ ವ್ಯವಸಾಯ ಮಾಡಿರುವವರನ್ನು ನೋಡಿಲ್ಲ. ನಾಲ್ಕೂವರೆಗೆ ಎದ್ದು ಹೊಲ ಉಳುತ್ತಿದ್ದೆ. ಮನೆಗೆ ಊಟಕ್ಕೆ ಬಾರದೆ ಅಲ್ಲೇ ಉಳುತ್ತಿದ್ದೆ. ೧೯೬೭ರಲ್ಲಿ ಉಂಟಾದ ಭೀಕರ ಬರಗಾಲ ಬಂದಿತ್ತು. ೧೯೬೯ರಲ್ಲಿ ಇಂದಿರಾಗಾಂಧಿ ಅವರು ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದಾಗ ಗುಂಗ್ರಾಲ್ ಛತ್ರದಲ್ಲಿ ಸೊಸೈಟಿ ಆರಂಭಿಸಿ ಕೃಷಿ ಜೊತೆಗೆ ಸಹಕಾರ ಸಂಘವನ್ನು ನೋಡಿಕೊಂಡು ಬಂದಿದ್ದರಿಂದಾಗಿ ಈ ಹಂತಕ್ಕೆ ಬೆಳೆಯಲು ಕಾರಣವಾಯಿತು ಎಂದು ವಿದ್ಯಾರ್ಥಿಗಳ ಎದುರು ಹಳೆಯ ದಿನಗಳನ್ನು ಬಿಡಿಸಿಟ್ಟರು.

೧೯೭೭-೭೮ರಲ್ಲಿ ಬ್ಯಾಂಕ್ ಮ್ಯಾನೇಜರ್‌ರೊಬ್ಬರು ಪಂಪ್ ಸೆಟ್ ತೆಗೆಸಿ ಕೃಷಿ ವ್ಯವಸಾಯ ಮಾಡುವಂತೆ ಹೇಳಿದ್ದ ಮಾನನ್ನು ಕೇಳಿ ಜಮೀನಿನಲ್ಲಿ ಬಾವಿ ತೆಗೆಸಿದೆ. ೧೧೦ ಕೆಜಿ ಬಾಳೆಗೊನೆ ಬೆಳೆದಿದ್ದೆ. ಕಬ್ಬು,ರೇಷ್ಮೆ, ಭತ್ತ ಬೆಳೆದೆ. ಕೋಲಾರದ ಕೊಂಡರಾಜ ಊರಿನಿಂದ ಆಲೂಗೆಡ್ಡೆಯನ್ನು ತಂದು ಬೆಳೆದಿದ್ದೇನೆ. ಸಮಗ್ರ ಕೃಷಿ ಪದ್ದತಿ ಮಾಡಬೇಕೆಂದು ಯೋಚಿಸಿ ಕನಕಾಂಬರ, ಸವತೆಕಾಯಿ ಬೆಳೆದಿದೆ. ಕಾಂಪೋಸ್ಟ್ ಗೊಬ್ಬರ ಮಾಡಿ ಯಶಸ್ವಿಯಾಗಿದ್ದರಿಂದ ಪ್ರಗತಿಪರ ರೈತ ಎನ್ನುವ ಬಿರುದು ದೊರೆತಿತ್ತು ಎಂದರು.

Tags:
error: Content is protected !!