ನಂಜನಗೂಡು : ತಾಲೂಕಿನ ತಾಂಡವಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಂಗಳವಾರ ಹಾಗೂ ಬುಧವಾರ ರಾತ್ರಿಯೂ ಗಾಳಿ ಮಳೆಯ ರಭಸ ಜೋರಾಗಿತ್ತು. ಚಳಿ ತೀವ್ರತೆಯಿಂದ ಜನರು ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ.
ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತಾಂಡವಪುರ, ಕೆಂಪಿಸಿದ್ದನಹುಂಡಿ, ಹುಳಿಮಾವು, ಮರಡಿಹುಂಡಿ, ಹಳ್ಳಿದಿಡ್ಡಿ, ಏಚಗಳ್ಳಿ, ಮರಳೂರು, ಬಿದರಗೂಡು, ರಾಂಪುರ, ಬಂಚಳ್ಳಿಹುಂಡಿ, ಚಿಕ್ಕಯ್ಯನಛತ್ರ, ಬಸವನಪುರ, ಹೆಜ್ಜಿಗೆ, ತೊರೆಮಾವು, ಅಡಕನಹಳ್ಳಿ, ಕಡಕೊಳ, ಕೋಚನಹಳ್ಳಿ, ಕೂಡನಹಳ್ಳಿ, ಮಾಕನಹುಂಡಿ, ಸಜ್ಜೆಹುಂಡಿ, ರಾಯನಹುಂಡಿ, ಸೋಮೇಶ್ವರಪುರ, ಹಬ್ಯಾ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ನಿರಂತರ ಮಳೆಯಾಗುತ್ತಿದೆ.
ಮಳೆ ಆರಂಭವಾದಾಗ ರೈತರ ಮೊಗವು ಸಂತಸಗೊಂಡಿತ್ತು. ಆದರೆ ಇದೀಗ ಸತತ ಮಳೆಯಿಂದಾಗಿ ದನ ಕರುಗಳಿಗೆ ಮೇವು ತರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ದಿನನಿತ್ಯದ ಕೃಷಿ ಚಟುವಟಿಕೆಗಳಿಗೂ ಮಳೆ ಅಡ್ಡಿಯಾಗಿದ್ದು, ಕೈಗಾರಿಕಾ ಪ್ರದೇಶಗಳಿಗೆ ಉದ್ಯೋಗಕ್ಕೆ ಹೋಗುವ ಕೆಲಸಗಾರರಿಗೂ ತೊಂದರೆಯಾಗಿದೆ.
ಮಳೆಯ ಜೊತೆಗೆ ಶೀತ ಗಾಳಿಯು ಬೀಸತೊಡಗಿದ್ದರಿಂದ ಜನರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.





