ಮೈಸೂರು: ಕಳೆದ 15 ವರ್ಷದಿಂದ ಕೆ.ಆರ್.ನಗರ ಹಾಳಾಗಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಕಿಡಿಕಾರಿದ್ದು, ಬಹಿರಂಗ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದು, ಜನ ನನಗೆ ರೆಸ್ಟ್ ಕೊಟ್ಟಿದ್ದಾರೆ. ಮೊನ್ನೆ ಕೆ.ಆರ್.ನಗರಕ್ಕೆ ಸಿಎಂ ಹೋಗಿದ್ದ ವೇಳೆ ಈ ಮಾತು ಹೇಳಿ ಹೋಗಿದ್ದಾರೆ. ಅದಕ್ಕೂ ಹಿಂದೆ ಸಾರಾ ಮಹೇಶ್ ಪಾಪದ ಕೊಡ ತುಂಬಿದೆ ಅಂದ್ರು. ಸೋತವರ ಪಾಪದ ಕೊಡ ತುಂಬಿದೆ ಅಂದ್ರೆ, ಸಿದ್ದರಾಮಯ್ಯ ಎಷ್ಟು ಬಾರಿ ಸೋತಿದ್ದಾರೆ? ಅವರದ್ದು ಪಾಪದ ಕೊಡ ತುಂಬಿದ್ಯಾ? ಎಂದು ಪ್ರಶ್ನೆ ಮಾಡಿದರು.
ಕೆ.ಆರ್.ನಗರದಲ್ಲಿ ನಾನು ತಂದ ಯೋಜನೆಗಳಿಗೆ ಉದ್ಘಾಟನೆ ಮಾಡಿ ಹೋಗಿದ್ದಾರೆ. ಈ ಹಿಂದೆ 175 ಕೋಟಿ ಅನುದಾನ ತಂದಿದ್ದೇ ನಾನು. ಆ ಎಲ್ಲಾ ಕಾರ್ಯಕ್ರಮಗಳಿಗೆ ಗುದ್ದಲಿಪೂಜೆ ನೆರವೇರಿಸಿದ್ದಾರೆ. ಈ ರಾಜ್ಯ ಹಾಳು ಮಾಡುತ್ತಿರುವವರು ಯಾರು ಎಂದು ಕಿಡಿಕಾರಿದರು.
ಇನ್ನು ರಾಜ್ಯದಲ್ಲಿ ಎಲ್ಲದರ ಬೆಲೆ ಏರಿಕೆ ಆಗಿದೆ. ಡೀಸೆಲ್, ಪೆಟ್ರೋಲ್, ಲಿಕ್ಕರ್ ವೆಹಿಕಲ್, ಪ್ರಾಪರ್ಟಿ ಟ್ಯಾಕ್ಸ್, ವಾಟರ್ ಬಿಲ್ ಎಲ್ಲವೂ ಕೂಡ ಜಾಸ್ತಿ ಆಗಿದೆ. ಹಾಲಿನಿಂದ ಹಾಲ್ಕೋ ಹಾಲ್ ತನಕ ಜಾಸ್ತಿ ಮಾಡಿದ್ದೇ ಸಿದ್ದರಾಮಯ್ಯ ಎಂದು ಕಿಡಿಕಾರಿದರು.





