Mysore
15
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ರಸ್ತೆಗಳಲ್ಲಿ ಸಂಚರಿಸುವವರಿಗೆ ಮುದ ನೀಡುವ ಮೇ ಫ್ಲವರ್‌

mayflower

ಕೆ. ಆರ್. ನಗರದಿಂದ ಭೇರ್ಯ ಗ್ರಾಮದವರೆಗೆ ಹಾಸನ- ಮೈಸೂರು ಹೆದ್ದಾರಿಯಲ್ಲಿ ಕೆಂಬಣ್ಣದ ಹೂಗಳ ಚಿತ್ತಾರ

ಭೇರ್ಯ ಮಹೇಶ್

ಕೆ. ಆರ್. ನಗರ: ಬೇಸಿಗೆಯ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಮೋಡಗಳು. . . ಭೂಮಿಗೆ ತಂಪೆರೆಯುವ ಮಳೆ ಹನಿಗಳು. . . ಇವೆಲ್ಲದಕ್ಕೂ ಜತೆಯಾಗಿ ಪಳಪಳ ಹೊಳೆಯುವ ಕೆಂಪನೆ ಹೂಗಳು. . . ದೂರ ದೂರಕ್ಕೂ ಕಣ್ಸೆಳೆಯುವ, ಹತ್ತಿರ ಬಂದರೆ ಆಹ್ಲಾದಕರ ಅನುಭವ ನೀಡುವ ಅಪೂರ್ವ ಮೇ ಫ್ಲವರ್ ಮರಗಳು ರಸ್ತೆಯಲ್ಲಿ ಸಂಚರಿಸುವವರ ಗಮನ ಸೆಳೆಯುತ್ತಿವೆ.

ಕೆ. ಆರ್. ನಗರದಿಂದ ಭೇರ್ಯ ಗ್ರಾಮ ದವರೆಗೆ ಹಾಸನ- ಮೈಸೂರು ಹೆದ್ದಾರಿಯಲ್ಲಿ ಬರುವ ಚಿಕ್ಕವಡ್ಡರಗುಡಿ, ಹೊಸ ಅಗ್ರಹಾರ, ರೈಲ್ವೆ ನಿಲ್ದಾಣ ಹಾಗೂ ಭೇರ್ಯ ಗ್ರಾಮದ ಆಸ್ಪತ್ರೆ ಆವರಣ ಮುಂತಾದ ಕಡೆಗಳಲ್ಲಿ ಮೇ ಫ್ಲವರ್ ಮರಗಳು ಹೂಗಳಿಂದ ತುಂಬಿ ಆಕರ್ಷಿಸುತ್ತಿವೆ.

ಬಣ್ಣ ಬಣ್ಣದ ಅಪರೂಪದ ಹೂವುಗಳು ಅರಳಿ ನಿಲ್ಲುವ ಕಾಲವಿದು. ಈ ತಿಂಗಳಲ್ಲಿ ಅರಳುವ ಮೇ ಫ್ಲವರ್ ಕಣ್ಮನ ಸೆಳೆಯುತ್ತಿವೆ. ಹಲವು ರಸ್ತೆ ಬದಿಗಳಲ್ಲೂ ಇವುಗಳ ಅಂದ ಮೈದಳೆದಿದೆ. ಅಂತೆಯೇ, ಈ ತಿಂಗಳಲ್ಲಷ್ಟೇ ಬಿಡುವ ಮತ್ತೊಂದು ಹೂವು ‘ಬಾಲ್ ಲಿಲ್ಲಿ’. ರಾಕೆಟ್ ನಂತೆ ಚಿಮ್ಮಲು ತಯಾರಾದಂತೆ ಭಾಸವಾಗುವ ಕೆಂಪು ಬಣ್ಣದ ಈ ಹೂವು ಕಂಗೊಳಿಸುತ್ತಿದೆ. ಜತೆಗೆ ತರಹೇವಾರಿ ಸಾಮಾನ್ಯ ಲಿಲ್ಲಿ ಹೂಗಳೂ ಆಕರ್ಷಿಸುತ್ತಿವೆ.

ಮನೆಗಳ ಮುಂದೆ ಅಲಂಕಾರಕ್ಕಾಗಿ ಪಾಟ್ ಗಳಲ್ಲಿ ಬೆಳೆಸಿರುವ ಲಿಲ್ಲಿ ಹೂ, ಕಣಿವೆ ಲಲ್ಲಿ ಹೂ, ಬಾಲ್ ಲಿಲ್ಲಿ ಹೂಗಳು ಮನಸ್ಸಿಗೆ ಮುದ ನೀಡುತ್ತಿವೆ. ಮೇ ತಿಂಗಳಲ್ಲಿ ಬಿಡುವ ಇತರ ಹೂ ಗಳು ಮೇ ಫ್ಲವರ್ (ಡೆಲೊನಿಕ್ಸ್ ರೆಜಿಯಾ), ಕ್ಯಾಷಿಯಾ ಜವಾನಿಕ, ಲೆಜಿಸ್ತೋನಿಯಾ, ಫ್ಲಮೇರಿಯಾ (ದೇವಕಣಿಗಲು), ರೈನ್ ಟ್ರೇ ಮತ್ತು ಕಾಪರ್ ಪಾಡ್ನ ಎಂಬ ಹಳದಿ ಬಣ್ಣದ ಹೂವುಗಳು ಮೇ ತಿಂಗಳಲ್ಲಿ ಕಾಣಸಿಗುತ್ತವೆ.

ಈಗಾಗಲೇ ಹಲವೆಡೆ ಹೂವು ಬಿಟ್ಟಿವೆ. ಇವುಗಳಲ್ಲಿ ಕೆಲವು ಹೂವು ಬಿಟ್ಟ ನಂತರ ಎರಡರಿಂದ ಮೂರು ತಿಂಗಳುಗಳ ಕಾಲವೂ ತಮ್ಮ ಸೊಬಗನ್ನು ಬೀರುತ್ತವೆ. ಮರದಲ್ಲಿ ಹೂ ಗೊಂಚಲುಗಳು ನಗೆ ಬೀರಿದರೆ, ಉದುರಿದ ದಳಗಳು ನೆಲದಲ್ಲಿ ಹೂ ಹಾಸಿಗೆಯಂತೆ ಕಂಗೊಳಿಸುತ್ತವೆ.

ಮೇ ಫ್ಲವರ್‌ಗಳನ್ನು ನಮ್ಮ ಪೂರ್ವಿಕರ ಕಾಲದಲ್ಲಿ ಮದುವೆ ಸಮಾರಂಭಕ್ಕೆ ಚಪ್ಪರಕ್ಕೆ ಹಾಗೂ ಹಬ್ಬಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಕಾಲ ಬದಲಾದಂತೆ ಈ ಮರದ ಸಂತತಿ ಕಡಿಮೆಯಾಗಿ ಗ್ರಾಮೀಣ ಭಾಗದಲ್ಲಿ ಮತ್ತು ನಗರ ಪ್ರದೇಶದ ಪಾರ್ಕ್‌ಗಳಲ್ಲಿ ನೋಡುಗರ ಕಣ್ಮನ ಸೆಳೆಯುತ್ತಿವೆ. -ಜೆ. ಎಂ. ಕುಮಾರ್, ಗೌರವಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಪರ್ವ ಸಂಘ

Tags:
error: Content is protected !!