ಶ್ರೀರಂಗಪಟ್ಟಣ: ಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂನಲ್ಲಿ ನಡೆದ ಮದುವೆ ಸಮಾರಂಭದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 4 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಗಂಜಾಂನ ಗೋಸಾಯಿಘಾಟ್ ರಸ್ತೆಯಲ್ಲಿರುವ ಗಣೇಶ ದೇವಾಲಯದ ಬಳಿ ನಡೆಯುತ್ತಿದ್ದ ಮದುವೆ ಸಮಾರಂಭದ ವೇಳೆ ಗಂಡು-ಹೆಣ್ಣಿನ ಕಡೆಯವರು ದೇವರು ತರಲು ನಾಲೆ ಬಳಿ ಹೋಗಿದ್ದ ವೇಳೆ ಪೂಜೆ ಮಾಡಿ ಹೊಗೆ ಹಾಕಿದ್ದು, ಮರದ ಮೇಲಿದ್ದ ಹೆಜ್ಜೇನು ಗೂಡಿಗೆ ಹೊಗೆ ಹಾಗೂ ಶಬ್ದ ತಾಗಿ ಜೇನು ಹುಳುಗಳು ದಾಳಿ ನಡೆಸಿವೆ.
ಪಕ್ಕದಲ್ಲೇ ಅಡುಗೆ ಮಾಡುತ್ತಿದ್ದವರ ಮೇಲೂ ಜೇನುಗಳು ಎರಗಿವೆ. ಈ ವೇಳೆ ಸಮಾರಂಭದಲ್ಲಿದ್ದ ಜನರು ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಗೋಪಾಲ, ಗುರು, ಶ್ರೀನಿವಾಸ, ಉಮೇಶ ಸೇರಿ 4 ಮಂದಿಗೆ ಹೆಚ್ಚಿನ ದಾಳಿಯಾಗಿದ್ದು, ಮೂರು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಹೆಜ್ಜೇನು ದಾಳಿಯಿಂದ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಸ್ವಲ್ಪ ಸಮಯದ ನಂತರ ತಿಳಿಗೊಂಡು ಮದುವೆ ಕಾರ್ಯ ನಡೆಸಲಾಗಿದೆ.





