ಮೈಸೂರು: ನೆರೆಯ ದೇಶ ಪಾಕಿಸ್ತಾನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವಾಗತ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್‌ಗೆ ನುಗ್ಗಿ ಹೊಡಿಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಹಿಂದೆ ಇಂದಿರಾ ಗಾಂಧಿ ಅವರು ಪಾಕಿಸ್ತಾನದವರನ್ನು ಮಂಡಿಯೂರಿ ಕೂರುವಂತೆ ಮಾಡಿದ್ರು. ಕಳೆದ 1971ರಲ್ಲಿ ನಡೆದ ಯುದ್ಧದ ಸಂದರ್ಭ ಯಾವ ರೀತಿ ಕ್ರಮ ಆಗಿತ್ತು ಅದನ್ನು ನೆನಪಿಸಿಕೊಳ್ಳಬೇಕು. ಅದೇ ರೀತಿ ಈಗಲೂ ಮಾಡಲಿ. ಆದ್ದರಿಂದ ಪ್ರಧಾನಿ ಮೋದಿ ಯಾವುದೇ ನಿರ್ಧಾರ ಕೈಗೊಂಡರು ನಾವು ಸ್ವಾಗತ ಮಾಡ್ತೀವಿ ಎಂದರು.
ಇನ್ನು ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಾಕ್ ಪರ ನಮ್ಮ ಮನೆಯವರೇ ಘೋಷಣೆ ಕೂಗಿದ್ರು ಶಿಕ್ಷೆ ಆಗಬೇಕು. ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ಆಗುತ್ತೆ. ಯಾರೇ ಪಾಕ್ ಪರ ಘೋಷಣೆ ಕೂಗಿದ್ರು ಶಿಕ್ಷೆ ಆಗಲಿ. ನನ್ನ ಅಣ್ಣ ತಮ್ಮನಾಗಲಿ ಯಾರೇ ಆಗಲಿ ಶಿಕ್ಷೆ ಆಗಲೇಬೇಕು.
ಇಂತಹ ಘಟನೆಗಳು ಯಾಕೆ ಜಾಸ್ತಿಯಾಗುತ್ತಿವೆ ಹಾಗೂ ಯಾಕೆ ಪಾಕ್ ಪರ ಘೋಷಣೆ ಕೂಗುತ್ತಿದ್ದಾರೆ ಗೊತ್ತಿಲ್ಲ. ನಾವಂತೂ ಘೋಷಣೆ ಕೂಗುವವರ ಪರವಿಲ್ಲ. ದೇಶದ ನಾನಾ ಭಾಗಗಳಲ್ಲೂ ಇಂತಹ ಘಟನೆಗಳು ನಡೆದಿವೆ. ಯಾಕೆ ನಡೆಯುತ್ತಿದೆ ಅನ್ನೋದಕ್ಕೆ ನಾನು ಹೊಣೆಗಾರ ಅಲ್ಲ. ಅದಕ್ಕೆ ನಾನು ಹೇಗೆ ಪ್ರತಿಕ್ರಿಯೆ ನೀಡಲಿ? ಎಂದು ಪ್ರಶ್ನೆ ಮಾಡಿದ ಸಚಿವರು, ದೇಶದಲ್ಲಿ ಕೆಲವು ಕಡೆ ಮುಸ್ಲಿಮರ ಮೇಲೂ ದೌರ್ಜನ್ಯ ನಡೆಯುತ್ತೆ ಅದನ್ನೂ ಕೇಳಬೇಕಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟರು.





